ಜಿಲ್ಲೆ

ಆಸ್ತಿ ಆಸೆಗಾಗಿ ಬಾಲಕನ ಕೊಲೆಗೆ ಯತ್ನ

ನರೇಗಲ್ಲ: ಆಸ್ತಿ ಆಸೆಗಾಗಿ ವ್ಯಕ್ತಿಯೊಬ್ಬ ಹೆಂಡತಿಯ ಸೋದರಿ ಮಗನನ್ನೇ ಹತ್ಯೆ ಮಾಡಲು ಯತ್ನಿಸಿದ ಘಟನೆ ಡ.ಸ. ಹಡಗಲಿ ಗ್ರಾಮದ ಹೊರವಲಯದಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದು, ಕೊಲೆ ಮಾಡಲು ಯತ್ನಿಸಿದ ಜಕ್ಕಲಿ ಗ್ರಾಮದ ಅಕ್ಬರ್​ಬಾಷಾ ರಾಜೇಸಾಬ್ ಹದ್ಲಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆಯ ವಿವರ: ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದ ನಿವಾಸಿಯಾಗಿರುವ ಆರೋಪಿ ಅಕ್ಬರ್​ಬಾಷಾ, ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಬಸಾಪೂರ ಗ್ರಾಮದ ತನ್ನ ಪತ್ನಿಯ ಸಹೋದರಿ ಮಗ ತೌಸಿಫ್ ಪೀರಸಾಬ್ ಅದರಗುಂಚಿ (10) ಎಂಬಾತನನ್ನು ಕರೆತಂದು ಪಾಲನೆ ಮಾಡುತ್ತಿದ್ದ. ಬಾಲಕನ ತಂದೆ-ತಾಯಿ ಕೆಲಸ ಅರಸಿ ಕೇರಳಕ್ಕೆ ಹೋಗಿದ್ದಾರೆ. ಸೋದರ ಸಂಬಂಧಿಯ ಒಬ್ಬನೇ ಮಗನನ್ನು ಕೊಂದರೆ ಆಸ್ತಿ ತನ್ನ ಪಾಲಾಗುತ್ತದೆ ಎಂದರಿತು ಬಾಲಕನ ಕೊಲೆಗೆ ಯತ್ನಿಸಿದ್ದಾನೆ. ಸೋಮವಾರ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಡ.ಸ. ಹಡಗಲಿ-ಗುಜಮಾಗಡಿ ರಸ್ತೆಯ ಜಮೀನೊಂದರಲ್ಲಿ ಮಾರಣಾಂತಿಕವಾಗಿ ಹಲ್ಲೆ ಮಾಡಿ ಮರಕ್ಕೆ ನೇಣು ಹಾಕಿದ್ದ. ಬಾಲಕ ಮೃತ ಪಟ್ಟಿದ್ದಾನೆ ಎಂದುಕೊಂಡು ಅಲ್ಲಿಂದ ಪರಾರಿಯಾದ. ಆದರೆ, ಅದೃಷ್ಟ ಬಾಲಕನ ಕೈ ಬಿಟ್ಟಿರಲಿಲ್ಲ. ನೇಣು ಸಡಿಲವಾಗಿ ಬಾಲಕ ನೆಲಕ್ಕೆ ಬಿದ್ದು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ. ಅದೇ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗ್ರಾಮಸ್ಥನೊಬ್ಬ ಈ ದೃಶ್ಯವನ್ನು ಕಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದ. ತಕ್ಷಣವೇ ಡ.ಸ. ಹಡಗಲಿ ಗ್ರಾ.ಪಂ. ಅಧ್ಯಕ್ಷ ಎನ್.ಸಿ. ಪಾಟೀಲ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಬಾಲಕನನ್ನು ಕಾರಿನಲ್ಲಿ ಕರೆದೊಯ್ದು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಬಾಲಕನ ಹೇಳಿಕೆ ಆಧಾರದ ಮೇಲೆ ಆರೋಪಿ ಅಕ್ಬರ್​ಬಾಷಾ ರಾಜೇಸಾಬ್​ನನ್ನು ನರೇಗಲ್ಲ ಠಾಣೆ ಪೊಲೀಸರು ಬಂಧಿಸಿ ದೂರು ದಾಖಲಿಸಿದ್ದಾರೆ.