ಜಿಲ್ಲೆ

ಆಸಾಮಿ ಸಾಲಕ್ಕೆ ಬಡ್ಡಿ ರಿಯಾಯಿತಿ ನೀಡಿ

ಯಲ್ಲಾಪುರ: ಸಹಕಾರಿ ಸಂಘಗಳು ರೈತರ ಆಸಾಮಿ ಸಾಲದ ಮೇಲೆ ಬಡ್ಡಿ ರಿಯಾಯಿತಿ ನೀಡಬೇಕು. ಸಾಲಮನ್ನಾ ಜೊತೆಗೆ ಬೆಳೆಗಾರರ ಹಿತದೃಷ್ಟಿಯಿಂದ ಸರ್ಕಾರ ವಿಶೇಷ ಪ್ಯಾಕೇಜ್ ಘೊಷಿಸಬೇಕೆಂದು ಹಿರಿಯ ಸಹಕಾರಿ, ಜಿಪಂ ಸದಸ್ಯ ಜಿ. ಎನ್. ಹೆಗಡೆ ಮುರೇಗಾರ ಆಗ್ರಹಿಸಿದರು.

ಅವರು ತಾಲೂಕಿನ ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೃಷಿ ಬಳಕೆ ಸಾಲಗಾರರ ಸಭೆಯಲ್ಲಿ ಮಾತನಾಡಿದರು.

ಶೇ. 3 ಬಡ್ಡಿದರ ಆಸಾಮಿ ಸಾಲಕ್ಕೂ ಅನ್ವಯವಾಗಬೇಕು. 25 ಲಕ್ಷ ರೂ.ವರೆಗೆ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಬೇಕು. ರಾಜಕೀಯ ಇಚ್ಛಾಶಕ್ತಿ ಪಡೆದುಕೊಂಡು ಸರ್ಕಾರದ ಗಮನ ಸೆಳೆದು ಆಸಾಮಿ ಸಾಲ ಮನ್ನಾ ಬಗೆಗೆ ಪ್ರಯತ್ನ ನಡೆಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ರೈತ ಮುಖಂಡ ಪಿ. ಜಿ. ಭಟ್ಟ ಬರಗದ್ದೆ ಮಾತನಾಡಿ, ರೋಗ ತಗುಲಿ ಅಡಕೆ ಬೆಳೆ ಶೇ.60-75 ರಷ್ಟು ಕಡಿಮೆಯಾಗಿದೆ. ಇಂದಿನ ಸ್ಥಿತಿಯಲ್ಲಿ ಆಸಾಮಿ ಸಾಲ ಮರುಪಾವತಿ ಮಾಡುವುದು ಕಷ್ಟವಾಗಿದೆ ಎಂದರು. ಪ್ರಮುಖರಾದ ಆರ್. ಟಿ. ಭಟ್ಟ, ರವೀಂದ್ರ ಭಟ್ಟ ದುಂಡಿ, ನಾರಾಯಣ ಗಾಮದ, ಸಂಘಟಕರಾದ ಜಯರಾಮ ಹೆಗಡೆ ಇತರರಿದ್ದರು.</