ಜಿಲ್ಲೆ

ಆಸಕ್ತಿಯಿಂದ ಕ್ರೀಡಾಭ್ಯಾಸ ಮಾಡಿ

ಚಿತ್ರದುರ್ಗ: ಆಸಕ್ತಿಯಿಂದ ಕ್ರೀಡಾಭ್ಯಾಸದಲ್ಲಿ ಪಾಲ್ಗೊಂಡರೆ ಅತ್ಯುತ್ತಮ ಸಾಧನೆ ಸಾಧ್ಯವಾಗಲಿದೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಹೊಳಲ್ಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಹಾಗೂ ಪುರುಷ ಮತ್ತು ಮಹಿಳೆಯರ ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಸಿನಿಮಾ ನಟರು ರಾಜ್ಯ, ದೇಶಕ್ಕೆ ಗೊತ್ತಿದ್ದರೆ ಉತ್ತಮ ಕ್ರೀಡಾಪಟುಗಳು ವಿಶ್ವಕ್ಕೆ ಪರಿಚಿತರಾಗಿರುತ್ತಾರೆ. ಕ್ರೀಡಾಪಟುಗಳಿಗೆ ತರಬೇತಿ, ಪ್ರೋತ್ಸಾಹ ಮುಖ್ಯ. ಸರ್ಕಾರ ಸಾಕಷ್ಟು ಮೂಲ ಸೌಕರ್ಯಗಳನ್ನು ಒದಗಿಸಿದರೂ ಪೂರಕ ಜವಾಬ್ದಾರಿ ಹೊತ್ತು ಶಿಕ್ಷಣದೊಂದಿಗೆ ಕ್ರೀಡೆಗೂ ಒತ್ತು ಕೊಟ್ಟರೆ ದೇಶಕ್ಕೆ ಕೀರ್ತಿ ತರಬಹುದು. ಕ್ರೀಡೆಯಿಂದ ಉತ್ತಮ ಆರೋಗ್ಯಕ್ಕೂ ನೆರವಾಗಲಿದೆ ಎಂದರು.

ಪ್ರಾಂಶುಪಾಲ ಶಿವಮೂರ್ತಿ ನಾಯ್ಕ, ದಾವಣಗೆರೆ ವಿವಿ ಕ್ರೀಡಾಧಿಕಾರಿ ಬಿ.ಎಚ್.ವೀರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಸಿ.ಮೋಹನ್, ಕರಿಸಿದ್ದಯ್ಯ ಒಡೆಯರ್ ಮತ್ತಿತರರು ಇದ್ದರು.