ಹಾಸನ: ವಿದ್ಯಾರ್ಥಿಗಳು ಇಷ್ಟ ಪಟ್ಟು ಆಸಕ್ತಿಯಿಂದ ಓದಿದಾಗ ಯಶಸ್ಸು ಸಾಧ್ಯ. ಸಾಧನೆಯ ಗುರಿ ಮುಟ್ಟಬೇಕಾದರೆ ಸತತ ಪ್ರಯತ್ನ, ಶ್ರದ್ಧೆಯಿಂದ ಓದುವಿಕೆಯನ್ನು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಮೊಹಮ್ಮದ್ ಸುಜಿತಾ ಕಿವಿಮಾತು ಹೇಳಿದರು.
ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಆಗಮನ 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮನಸ್ಸು ಮಾಡಿದರೆ ಏನಾದರೂ ಸಾಧಿಸಬಹುದು ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿಯೇ ಯುವಕ ಯುವತಿಯರು ತಾವು ಜೀವನದಲ್ಲಿ ಏನಾಗಬೇಕೆಂಬುವುದನ್ನು ನಿರ್ಧರಿಸಿಕೊಳ್ಳಬೇಕು. ತಮ್ಮ ಗುರಿ ಸಾಧಿಸುವ ನಿಟ್ಟಿನಲ್ಲಿ ನಿರಂತರ ಪರಿಶ್ರಮ ಹಾಕುವ ಮೂಲಕ ಗುರಿ ಮುಟ್ಟಬೇಕು. ಸಾಮಾನ್ಯವಾಗಿ ಇಂದಿನ ಯುವಕರಲ್ಲಿ ನಿರಾಸಕ್ತಿ ಹೆಚ್ಚಾಗಿರುವುದರಿಂದ ಅವರುಗಳ ಸಾಧನೆಗೆ ಅಡ್ಡಿಯುಂಟಾಗಲು ಕಾರಣವಾಗಿದೆ. ಕೇವಲ ವೈದ್ಯಕೀಯ, ಎಂಜಿನಿಯರಿಂಗ್, ಐಐಟಿ ಓದಿದವರು ಮಾತ್ರ ಸಾಧನೆ ಮಾಡುತ್ತಾರೆ. ಹಳ್ಳಿಗಾಡಿನಿಂದ ಬಂದ ನಾವುಗಳು ಕೇವಲ ಸಾಮಾನ್ಯ ಪದವಿ ಪಡೆದ ನಮಗೆ ಸಾಧಿಸಿವುದು ಕಷ್ಟ ಎಂಬ ಕಲ್ಪನೆಯಲ್ಲಿ ಮುಳುಗಿ ಹೋಗಿದ್ದಾರೆ ಎಂದರು.
ನಾನು ವಾಣಿಜ್ಯಶಾಸ್ತ್ರ ಅಧ್ಯಯನ ಮಾಡಿ ನಾಗರಿಕ ಸೇವಾ ಪರೀಕ್ಷೆ (ಯುಪಿಎಸ್‌ಸಿ) ಪರೀಕ್ಷೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಹುದ್ದೆಗೆ ಬಂದಿದ್ದೇನೆ. ಸಾಧನೆ ಮಾಡಲು ಎಷ್ಟು ಬಾರಿ ಪರೀಕ್ಷೆ ಎದುರಿಸಿದೆ ಎಂಬುವುದು ಮುಖ್ಯವಲ್ಲ ಬದಲಾಗಿ ಸಾಧಿಸುವುದು ಮುಖ್ಯ. ಹಾಗಾಗಿ ಯುವತಿಯರು ತಮ್ಮ ಗುರಿ ಸಾಧನೆ ಮಾಡಬೇಕಾದರೆ ಧೃತಿಗೆಡದೆ ಸಾಧಿಸುವ ಛಲವನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಪ್ರತಿಯೊಂದು ವಿಚಾರದಲ್ಲೂ ಧೈರ್ಯವಾಗಿ ತಮ್ಮ ಜೀವನವನ್ನು ಕಟ್ಟಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಚ.ಪಿ. ಡಾ.ಪೂರ್ಣಿಮಾ ಮಾತನಾಡಿ, ನಮ್ಮ ಮಹಿಳಾ ಕಾಲೇಜು ಇತರೆ ಪದವಿ ಕಾಲೇಜುಗಳಿಗಿಂತ ಮಾದರಿ ಕಾಲೇಜಾಗಿ ಕಾರ್ಯನಿರ್ವಹಿಸುತ್ತಿದೆ. ಪಠ್ಯದೊಂದಿಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅವರಿಗೆ ತರಬೇತಿ ನೀಡುವ ಮೂಲಕ ಅವರನ್ನು ಒಬ್ಬ ಪರಿಪೂರ್ಣ ವ್ಯಕ್ತಿಗಳನ್ನಾಗಿ ಮಾಡಲಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ಅನೇಕ ಕ್ರೀಯಾಶೀಲ ಬುದ್ಧಿವಂತ ಮಕ್ಕಳಿದ್ದು, ಅವರು ತಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಂಡು ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಬೇಕು. ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಕಾಲೇಜು ಅಧ್ಯಾಪಕ ಕೆ.ಆರ್. ಗೋಪಾಲ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಜಿ. ರಾಜಶೇಖರ್, ಅಧ್ಯಾಪಕರಾದ ಬಿ.ಪಿ.ಜಗದೀಶ್, ಯೋಗೇಶ್, ವಿ.ಭಾಸ್ಕರ್, ಶಂಕರ್ ರೆಡ್ಡಿ, ಡೇವಿಡ್ ಕುಮಾರ್, ಮಧುಸೂದನ್, ಮೋಹನ್ ಕುಮಾರ್ ಹಾಗೂ ಇತರರು ಇದ್ದರು.