ಕಲಬುರಗಿ: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ೫೦ ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಸುಸಂದರ್ಭದಲ್ಲಿ “ಕರ್ನಾಟಕ ಸಂಭ್ರಮ ೫೦” “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ” ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ ವೈವಿಧ್ಯಮಯವಾಗಿ ವರ್ಣಮಯವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಮೂಲಕ ಇದಕ್ಕೊಂದು ವಿಶೇಷ ಮೆರುಗು ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಉದ್ದೇಶಿಸಿದೆ. ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಲು ಕನ್ನಡ-ನಾಡು-ನುಡಿ-ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಲಾಂಛನ (ಲೋಗೋ)ವನ್ನು ಬಳಸಲು ತೀರ್ಮಾನಿಸಿದೆ. ಇದಕ್ಕಾಗಿ ಆಸಕ್ತರಿಂದ ಸುಂದರವಾದ ಲಾಂಛನ (ಲೋಗೋ) ಮಾದರಿಗಳನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾಗುವ ಮಾದರಿ ಲಾಂಛನಕ್ಕೆ ೨೫,೦೦೦ ರೂ. ಗಳ ಬಹುಮಾನವನ್ನು ನಿಗದಿಪಡಿಸಲಾಗಿದೆ. ಆಸಕ್ತರು ಲಾಂಛನ (ಲೋಗೋ)ದ ಮಾದರಿಗಳನ್ನು ಕಳುಹಿಸಲು ೨೦೨೩ರ ಸಪ್ಟೆಂಬರ್ ೩೦ ರವರೆಗೆ ಅವಕಾಶ ಇರುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್ ಜಾಲತಾಣದಿಂದ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.