ಚಿತ್ರದುರ್ಗ: ಸಬ್ಸಿಡಿ ಸೇರಿ ಸರ್ಕಾರಿ ಸವಲತ್ತುಗಳನ್ನು ದುರ್ಬಳಕೆ ಮಾಡಿಕೊಳ್ಳಬೇಕೆಂಬ ಉದ್ದೇಶ ಹೊಂದಿರುವ ಕಂಪನಿಗಳ ಬದಲಿಗೆ ಆಸಕ್ತ ಉದ್ಯಮ ದಾರರಿಗೆ ಜವಳಿ ಪಾರ್ಕ್ ಸ್ಥಾಪನೆಗೆ ಅವಕಾಶ ಮಾಡಿಕೊಡಿ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.
ಹೊಸದುರ್ಗದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಸಂಬಂಧ ಬೆಂಗಳೂರಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಕೆಲವರು ಕೇವಲ ಸಬ್ಸಿಡಿಗಾಗಿ ಜವಳಿ ಪಾರ್ಕ್‌ಗೆ ಆಸಕ್ತಿ ತೋರಿಸುತ್ತಾರೆ. ನಂತರ ಅಭಿವೃದ್ಧಿಗೆ ಮುಂದಾಗುವುದಿಲ್ಲ. ಇಂತಹ ಕಂಪನಿಗಳು ನಮಗೆ ಬೇಕಿಲ್ಲ. ಜವಳಿ ಕ್ಷೇತ್ರದ ಸಾಧಕರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿ ಉತ್ತೇಜನ ನೀಡುವಂತೆ ಸಚಿವರು ಜವಳಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜವಳಿ ಪಾರ್ಕ್ ಸ್ಥಾಪನೆ ಕುರಿತು ಮಾಹಿತಿ ಪಡೆದ ಸಚಿವರು, ಹೊಸದುರ್ಗ ಶಾಸಕ ಗೋವಿಂದಪ್ಪ ಅವರೊಂದಿಗೆ ಸಂಪರ್ಕದಲ್ಲಿದ್ದು,ಪಾರ್ಕ್ ಸ್ಥಾಪನೆ ತ್ವರಿತಕ್ಕೆ ಕ್ರಮ ವಹಿಸುವಂತೆ ಸೂಚಿಸಿದರು. ಪ್ರಸ್ತುತ ಕಂಪನಿಯೊಂದರ ಬಗ್ಗೆ ಒಳ್ಳೆ ಅಭಿಪ್ರಾಯವಿಲ್ಲ. ಹೀಗಾಗಿ ಬೇರೆ ಕಂಪನಿಗೆ ಅವಕಾಶ ನೀಡುವ ಬಗ್ಗೆ ಆಲೋಚನೆ ಮಾಡಿ, ವಿಳಂಬ ಮಾಡಿದರೆ ಆಸಕ್ತರಿಗೆ ಅವಕಾಶ ಕೊಡಬೇಕು ಎಂದರು.
ಶಾಸಕರು ಮಾತನಾಡಿ, ನಾವು ಯಾವುದೇ ಕಂಪನಿ ಪರ ಶಿಫಾರಸು ಮಾಡುವುದಿಲ್ಲ. ಇಲಾಖೆ ಯಾವುದೇ ಕಂಪನಿಗೆ ಅವಕಾಶ ಕೊಡಲಿ, ಕ್ಷೇತ್ರದಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾಗಬೇಕೆಂಬುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಹೊಸದುರ್ಗ ತಾಲೂಕು ಅರಳಿಹಳ್ಳಿಯಲ್ಲಿ ಪಾರ್ಕ್‌ಗೆಂದು ಭೂ ಪರಿವರ್ತನೆಯೊಂದಿಗೆ ಜಿಲ್ಲಾಧಿಕಾರಿ 30 ಎಕರೆ ಜಮೀನು ಮಂಜೂರು ಮಾಡಿದ್ದಾರೆ. ರಾಜ್ಯ ಜವಳಿ ಅಭಿವೃದ್ಧಿ ನಿಗಮದಿಂದ 23.30 ಲಕ್ಷ ರೂ. ಪಾವತಿಸಲಾಗಿದೆ ಎಂದು ಕೆಎಸ್‌ಟಿಐಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಸಚಿವರ ಗಮನಕ್ಕೆ ತಂದರು.
ಡಾ.ಡಿ.ಎಂ. ನಂಜುಂಡಪ್ಪ ವರದಿಯಂತೆ ಹೊಸದುರ್ಗ ಅತಿ ಹಿಂದುಳಿದ ತಾಲೂಕಾಗಿದೆ. ಇಲ್ಲಿ ಪಾರ್ಕ್ ಸ್ಥಾಪನೆಯಾದರೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದರು.
ಬೈನರಿ ಅಪರೆಲ್ ಪಾರ್ಕ್ ಪ್ರೈ.ಲಿ. ಅವರು ಹಿರಿಯೂರು ತಾಲೂಕಿನಲ್ಲಿ ಅಪರೆಲ್ ಪಾರ್ಕ್ ಸ್ಥಾಪಿಸಿ, 4 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿರುವುದಾಗಿ ತಿಳಿಸಿದೆ. ಹೊಸದುರ್ಗದಲ್ಲೂ 100 ಕೋಟಿ ರೂ. ಬಂಡವಾಳದೊಂದಿಗೆ ಉದ್ಯಮ ಸ್ಥಾಪಿಸಿ ಐದು ಸಾವಿರ ಜನರಿಗೆ ಉದ್ಯೋಗ ಒದಗಿಸುವ ಭರವಸೆ ನೀಡಿದೆ. ಶಾಹಿ ಗಾಮೆರ್ಂಟ್ಸ್ ಕೂಡ ಆಸಕ್ತಿ ತೋರಿಸಿದೆ. ಈ ಕಂಪನಿ 8 ಸಾವಿರ ಕೋಟಿ ರೂ. ವಹಿವಾಟು ಹೊಂದಿದ್ದು, 80 ಸಾವಿರಕ್ಕೂ ಅಧಿಕ ಉದ್ಯೋಗಾವಾಶ ಕಲ್ಪಿಸಿದೆ. ಅಪರೆಲ್ಸ್‌ನಲ್ಲಿ ಶಾಹಿ ಮೊದಲ ಸ್ಥಾನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಸ್‌ಟಿಐಡಿಸಿ ಜಂಟಿ ನಿರ್ದೇಶಕ ರವೀಂದ್ರ ಮತ್ತಿತರರು ಇದ್ದರು.