ಜಿಲ್ಲೆ

ಆಷಾಢ ಶುಕ್ರವಾರಕ್ಕೆ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಜನಸಾಗರ

ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬಂದಿತ್ತು. ಮುಂಜಾನೆಯಿಂದ ರಾತ್ರಿ 10 ಗಂಟೆ ವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದೇವಿಯ ದರ್ಶನ ಪಡೆದರು. ಭಕ್ತರಿಂದ ಆಗಾಗ್ಗೆ ಜಯಘೋಷಗಳು ಮೊಳಗಿದವು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚಾಮುಂಡಿಬೆಟ್ಟದ 1001 ಮೆಟ್ಟಿಲುಗಳನ್ನು ಹತ್ತಿ ಬಂದು ದರ್ಶನ ಪಡೆದರೆ, ಮಾಜಿ ಶಾಸಕರಾದ ಅನಿತಾ ಕುಮಾರಸ್ವಾಮಿ, ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಶರವಣ ಸೇರಿದಂತೆ ಅನೇಕ ಗಣ್ಯರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಮಾಡಿದರು.
ಆಷಾಢ ಮಾಸದ ಕಡೆಯ ಶುಕ್ರವಾರವಾದ್ದರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುಂಜಾನೆ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾದವು. ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು.
ಪ್ರತಿ ಆಷಾಢ ಶುಕ್ರವಾರ ಒಂದೊಂದು ಅಲಂಕಾರ ಮಾಡುವ ವಿಶೇಷದಂತೆ ಈ ವಾರ ಚಾಮುಂಡೇಶ್ವರಿಗೆ ವಿಶೇಷ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ವಿವಿಧ ಬಣ್ಣಗಳ ಸೇವಂತಿಗೆ, ಚೆಂಡು, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ದೇವಸ್ಥಾನದ ಆವರಣ ಅಲಂಕೃತಗೊಂಡಿತ್ತು. ದೇವಾಲಯದ ಪ್ರವೇಶದ್ವಾರ, ಹೊರಾವರಣವೂ ವಿಶೇಷವಾಗಿ ಸಿಂಗಾರಗೊಂಡಿತ್ತು.
ಮುಂಜಾನೆ 5.30ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30ರಿಂದ 7ರವರೆಗೆ ತಾಯಿಗೆ ಮತ್ತೊಮ್ಮೆ ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ 10ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದುಬಂದಿತ್ತು. ಕೆಲವರು ಸಾರಿಗೆ ಬಸ್‌ಗಳಲ್ಲಿ ಬಂದರೆ, ಇನ್ನೂ ಕೆಲವರು ಮೆಟ್ಟಿಲುಗಳ ಮೂಲಕ ಆಗಮಿಸಿದರು. ಚಾಮುಂಡಿಬೆಟ್ಟದ ಪಾದದಿಂದ ಪ್ರತಿ ಮೆಟ್ಟಿಲಿಗೂ ಅರಿಶಿಣ, ಕುಂಕುಮ, ಹೂವುಗಳನ್ನಿಟ್ಟು, ಕರ್ಪೂರ ಹಚ್ಚಿ ಭಕ್ತಿಭಾವದಿಂದ ಮೆಟ್ಟಿಲು ಹತ್ತಿ ಹರಕೆ ತೀರಿಸಿದರು. ಕಳೆದ ವಾರಗಳಂತೆಯೇ ಬೆಟ್ಟಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 7ರಿಂದ ರಾತ್ರಿವರೆಗೂ ಪ್ರಸಾದ ವಿತರಣೆ ನಡೆಯಿತು.
ಸಾರಿಗೆ ಬಸ್ ಉಚಿತ ವ್ಯವಸ್ಥೆ:
ನೂಕುನುಗ್ಗಲು ತಪ್ಪಿಸಲು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಬೆಟ್ಟಕ್ಕೆ ತೆರಳುವ ತಾವರೆಕಟ್ಟೆ ಬಳಿಯೇ ಖಾಸಗಿ ವಾಹನಗಳನ್ನು ತಡೆದು ಪೊಲೀಸರು ವಾಪಸ್ ಕಳುಹಿಸುತ್ತಿದ್ದರು. ಲಲಿತಮಹಲ್ ಹೆಲಿಪ್ಯಾಡ್ ಬಳಿಯಿಂದ ಬೆಟ್ಟಕ್ಕೆ ತೆರಳಲು ನಗರ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿತ್ತು.
ರಾಜ್ಯಾದ್ಯಂತ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ ವ್ಯವಸ್ಥೆ ಇದ್ದರೆ, ಚಾಮುಂಡಿಬೆಟ್ಟಕ್ಕೆ ಮಹಿಳೆಯರು, ಪುರುಷರು, ಮಕ್ಕಳಿಗೂ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿತ್ತು. ಬಸ್‌ಗಳು ತುಂಬಿ ತುಳುಕುತ್ತಿದ್ದವು. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರಿಂದ ಅನುಮತಿ ಪಡೆದ ವಾಹನಗಳನ್ನು ಮಾತ್ರ ಬಿಡಲಾಯಿತಲ್ಲದೆ, ದೇವರ ದರ್ಶನಕ್ಕಾಗಿ ಇವರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು.