ಜಿಲ್ಲೆ

ಆಷಾಢ ಶುಕ್ರವಾರ: ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳ ಬೆಳಗ್ಗೆ 5ರಿಂದ ಸಂಜೆ 6ರ ವರೆಗೆ ಮಾತ್ರ ಅವಕಾಶ

ಮೈಸೂರು: ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತರಿಗೆ ಪಾದದ ಬಳಿ ಬೆಳಗ್ಗೆ 5ರಿಂದ ಸಂಜೆ 6ರವರೆಗೆ ಮಾತ್ರಪ್ರವೇಶಕ್ಕೆ ಅವಕಾಶ ಇದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಕಳೆದ ಜೂ.27ರಂದು ಆಷಾಢ ಮಾಸದ ಮೊದಲನೇ ಶುಕ್ರವಾರದಂದು ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಧರ್ಮದರ್ಶನದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮತ್ತು ಚಾಮುಂಡೇಶ ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗಿತ್ತು.

ಈ ಸಂಬಂಧ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕಾಗಿ ವಿವಿಧ ಸರದಿ ಸಾಲುಗಳನ್ನು ವಿಂಗಡಿಸಿ ಪ್ರತಿಯೊಂದಕ್ಕೂ ಪ್ರವೇಶದ ಮಾರ್ಗವನ್ನು ನಿಗದಿಪಡಿಸಿ ಮೆಟ್ಟಿಲುಗಳ ಮೂಲಕ ಬರುವ ಭಕ್ತಾದಿಗಳಿಗೆ ಬೆಳಗ್ಗೆ 5ರಿಂದ ಧರ್ಮದರ್ಶನದ ಸಾಲಿನ ಮೂಲಕ ದೇವರ ದರ್ಶನಕ್ಕೆ ಅನುವು ಮಾಡಲಾಗಿತ್ತು.

ಆದರೆ, ಜೂ.27ರಂದು ಭಕ್ತಾದಿಗಳು, ಸಾರ್ವಜನಿಕರು ನಡುರಾತ್ರಿ ಒಂದು ಗಂಟೆಯಿಂದಲೇ ಬೆಟ್ಟದ ಪಾದದ ಬಳಿ ಜಮಾವಣೆಗೊಂಡು ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 5 ಗಂಟೆಗೆ ಮುಂಚಿತವಾಗಿ ಯಾವುದೇ ಸಾರ್ವಜನಿಕರು ಮತ್ತು ವಾಹನಗಳು ಜಮಾವಣೆಯಾಗಲು ಅವಕಾಶ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜು.4ರಂದು ಆಷಾಢ ಶುಕ್ರವಾರದಂದು ಜಿಲ್ಲಾಡಳಿತ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ಆಗಮಿಸುವ ಭಕ್ತಾದಿಗಳಿಗೆ ದೇವಸ್ಥಾನದ ಹೊರ ಆವರಣದಲ್ಲಿ ಪ್ರತ್ಯೇಕವಾದ ಸಾಲಿನ ವ್ಯವಸ್ಥೆ ಮಾಡಿದ್ದು, ಈ ಸಾಲು ಮುಂದೆ ಸಾಗಿ ಧರ್ಮದರ್ಶನದ ಸಾಲಿನೊಂದಿಗೆ ಸೇರಿಕೊಂಡ ನಂತರ ಒಟ್ಟಾಗಿ ಸಾಗಿ ದರ್ಶನ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೆಟ್ಟದ ಹೊರ ಆವರಣದಲ್ಲಿ ದರ್ಶನದ ಎಲ್ಲ ಸಾಲುಗಳಲ್ಲಿನ ಭಕ್ತಾದಿಗಳು ಸೇರಿದಂತೆ ಒಮ್ಮೆಗೆ ಸುಮಾರು 15 ಸಾವಿರ ಜನರಿಗೆ ಆಗುವಷ್ಟು ಮಾತ್ರ ಸ್ಥಳಾವಕಾಶ ಇದೆ. ದೇವಸ್ಥಾನದ ಹೊರ ಆವರಣದಿಂದ ವಿವಿಧ ಸಾಲುಗಳ ಮೂಲಕ ಆಗಮಿಸುವ ಭಕ್ತಾದಿಗಳು ದೇವಸ್ಥಾನದ ಒಳ ಪ್ರಾಂಗಣಕ್ಕೆ ಸೇರಿ ಒಟ್ಟಾಗಿ ದರ್ಶನ ಮಾಡಬೇಕಾಗಿರುತ್ತದೆ.

ಆದ್ದರಿಂದ ಸಾರ್ವಜನಿಕರು ನೂಕುನುಗ್ಗಲು, ಕಾಲ್ತುಳಿತ ಮುಂತಾದ ಅವಘಡಗಳಿಗೆ ಆಸ್ಪದ ಕೊಡದಂತೆ ತಾಳ್ಮೆಯಿಂದ ಸಹಕರಿಸಿ ದೇವರ ದರ್ಶನವನ್ನು ಮಾಡಬೇಕು ಎಂದು ಕೋರಿದ್ದಾರೆ.