ಮೈಸೂರು: ಆಷಾಢ ಮಾಸದ ಅಂಗವಾಗಿ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೆಟ್ಟಕ್ಕೆ ಭಾನುವಾರ ಭೇಟಿ ನೀಡಿ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಕಲ್ಪಿಸಿರುವ ಅಗತ್ಯ ವ್ಯವಸ್ಥೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಷಾಢ ಮಾಸದ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮಾಡಿರುವ ವ್ಯವಸ್ಥೆ ಉತ್ತಮವಾಗಿದೆ. ಸಣ್ಣಪುಟ್ಟ ವ್ಯತ್ಯಾಸಗಳು ಉಂಟಾಗುವುದು ಸಹಜ. ಮುಂದೆ ಅವುಗಳನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು.
ಆಷಾಢ ಶುಕ್ರವಾರದಂದು ಸಾರಿಗೆ ಬಸ್‌ಗಳಲ್ಲಿ 80 ಸಾವಿರ, ಮೆಟ್ಟಿಲುಗಳಲ್ಲಿ 50 ಸಾವಿರ ಜನರು ಆಗಮಿಸಿ ದರ್ಶನ ಪಡೆದಿರುವ ಮಾಹಿತಿ ಇದೆ. ಆದ್ದರಿಂದ ಅನನುಕೂಲವಾಗದಂತೆ ತಡೆಯಲು ಏನಾದರೂ ಸುಧಾರಣೆ ಮಾಡುವುದು ಅಗತ್ಯವಿದ್ದರೆ ಮಾಡಬಹುದೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಜನಸಂದಣಿ ನಿರ್ವಹಣೆ, ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕು. ಸುಗಮವಾಗಿ ದರ್ಶನಕ್ಕಾಗಿ ಅಗತ್ಯ ಸಿದ್ಧತೆ ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀ ಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್‌ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವಿರ್ ಆಸಿಫ್, ಶ್ರೀ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಡಿಸಿಪಿಗಳಾದ ಮುತ್ತುರಾಜ್, ಸುಂದರರಾಜ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.