ಬೀದರ್: ಚಿಟ್ಟಾವಾಡಿ ಹತ್ತಿರದ ಆಶ್ರಯ ಮನೆಗಳಿಗೆ ಮೂಲಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ (ಭೀಮವಾದ) ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮಿತಿ ಕಾರ್ಯಕರ್ತರು ಹಾಗೂ ಸ್ಥಳೀಯರು, ಆಶ್ರಯ ಮನೆಗಳಿಗೆ ಸೌಲಭ್ಯ ಒದಗಿಸಲು ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಸತತ ಹೋರಾಟ ಮಾಡುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
8 ವರ್ಷಗಳಿಂದ 200ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸವಾಗಿವೆ. ವಿದ್ಯುತ್, ನೀರು, ಒಳಚರಂಡಿ, ಆಸ್ಪತ್ರೆ, ಅಂಗನವಾಡಿ ಸೇರಿ ಹಲವು ಸೌಲಭ್ಯಗಳಿಂದ ಜನರು ವಂಚಿತಗೊಂಡಿದ್ದಾರೆ. ಜನರಿಗೆ ಮನೆಗಳ ಹಕ್ಕುಪತ್ರ ನೀಡಿಲ್ಲ. ರಾತ್ರಿ ವೇಳೆ ಹಾವು-ಚೇಳು ಕಾಟವಿದ್ದು, ಮಹಿಳೆ, ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಎಂದು ಗೋಳು ತೋಡಿಕೊಂಡರು. ಅಧಿಕಾರಿಗಳು ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಜಿಲ್ಲಾ ಸಂಚಾಲಕ ಕಲ್ಯಾಣರಾವ ಭೋಸ್ಲೆ, ಪ್ರಮುಖರಾದ ರಮೇಶ ಕಾಳೇಕರ್, ಅಶೋಕ ಸಂಗಮ, ಸಂಜು ಮೇತ್ರೆ, ಮಾಣಿಕ ಪವಾರ್, ನಾಗರಾಜ ಡಿ.ಕೆ., ಸಂಜು ಲಾಧಾ, ಮನೋಜ ಡಾಕುಳಗಿ ಇತರರಿದ್ದರು. ಬೇಡಿಕೆ ಸಂಬಂಧ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಲಾಯಿತು.