ಜಿಲ್ಲೆ

ಆಶ್ರಯ ಮನೆಗಳಿಗೆ ಸೌಲಭ್ಯ ಕಲ್ಪಿಸಿ

ಬೀದರ್: ತಾಲೂಕಿನ ಚಿಟ್ಟಾವಾಡಿ ಗ್ರಾಮದ ಆಶ್ರಯ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಘಟಕ ಮಂಗಳವಾರ ಇಲ್ಲಿ ಪ್ರತಿಭಟನೆ ನಡೆಸಿತು.

ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ, ಚಿಟ್ಟಾವಾಡಿ ಗ್ರಾಮದ ಆಶ್ರಯ ಮನೆಗಳಲ್ಲಿ 7 ವರ್ಷಗಳಿಂದ 200 ಕುಟುಂಬ ವಾಸವಾಗಿವೆ. ಆದರೆ ಇಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್, ಶೌಚಗೃಹ ಹಾಗೂ ನೀರಿನ ವ್ಯವಸ್ಥೆಗಳು ಇಲ್ಲ. ಇದರಿಂದ ಸ್ಥಳೀಯರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.

ಕರೆಂಟ್ ಇಲ್ಲದ ಕಾರಣ ರಾತ್ರಿ ವೇಳೆ ಹಾವು ಕಡಿದು ಜೀವ ಹಾನಿಯಾಗಿರುವ ಘಟನೆ ನಡೆದಿವೆ. ಇಲ್ಲಿನ ಸಮಸ್ಯೆಗಳ ಕುರಿತು ಹಲವು ಸಲ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ವಾರದೊಳಗೆ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸ್ಥಳೀಯ ನಿವಾಸಿಗಳ ಜತೆಗೆ ಡಿಸಿ ಕಚೇರಿ ಎದುರು ನಿರಶನ ಆರಂಭಿಸುವುದಾಗಿ ಎಚ್ಚರಿಸಿದ್ದಾರೆ.

ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯಲ್ಲಿನ ಅವ್ಯವಹಾರ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಔರಾದ್ ನಲ್ಲಿ ಎಸ್ಸಿಪಿ, ಟಿಎಸ್ಪಿ ಯೋಜನೆಗಳ ದುರ್ಬಳಕೆ ಕುರಿತು ತನಿಖೆ ನಡೆಸಬೇಕು ಎಂಬಿತ್ಯಾದಿ ಬೇಡಿಕೆ ಮಂಡಿಸಿದ್ದಾರೆ. ಡಿಸಿ ರಾಮಚಂದ್ರನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಮಿತಿ ಜಿಲ್ಲಾ ಸಂಚಾಲಕ ಕಲ್ಯಾಣರಾವ ಭೋಸ್ಲೆ, ಪ್ರಮುಖರಾದ ರಮೇಶ ಕಾಳೇಕರ್, ಅಶೋಕ ಸಂಗಮ್, ಮಾಣಿಕರಾವ ಪವಾರ, ಸಂಜುಕುಮಾರ ಮೇತ್ರೆ, ನಾಗರಾಜ ಮರ್ಜಾಪುರ, ಸಂಜೀವಕುಮಾರ ಲಾಧಾ, ಮನೋಜ ನಿಂಬೂರೆ ಇದ್ದರು.