ಎನ್.ಆರ್.ಪುರ ತಾಪಂನಲ್ಲಿ ಆಡಳಿತಾಧಿಕಾರಿ ಎಲ್.ನಂದೀಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಇಒ ಎಚ್.ಡಿ.ನವೀನ್‌ಕುಮಾರ್ ಇದ್ದರು.  
ಜಿಲ್ಲೆ

ಆಶ್ರಯ ನಿವೇಶನದ ಜಾಗ ಸದ್ಬಳಕೆಯಾಗಲಿ

ಎನ್.ಆರ್.ಪುರ: ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಆಶ್ರಯ ನಿವೇಶನಕ್ಕೆ ಗುರುತಿಸಿರುವ ಜಾಗಗಳು ಮಂಜೂರಾದ ಉದ್ದೇಶಕ್ಕಾಗಿ ಸದ್ಬಳಕೆಯಾಗಬೇಕೆಂದು ತಾಪಂ ಆಡಳಿತಾಧಿಕಾರಿ ಹಾಗೂ ಕೊಪ್ಪ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಎಲ್.ನಂದೀಶ್ ತಿಳಿಸಿದರು.

ಬುಧವಾರ ತಾಪಂನಲ್ಲಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಶ್ರಯ ನಿವೇಶನಕ್ಕಾಗಿ ಬಹಳಷ್ಟು ಕಷ್ಟಪಟ್ಟು ಜಾಗ ಗುರುತಿಸಲಾಗಿದೆ. ಜಾಗ ಮಂಜೂರಾದ ಉದ್ದೇಶಕ್ಕಾಗಿಯೇ ಬಳಕೆಯಾದರೆ ಮಾತ್ರ ಸಾರ್ಥಕವಾಗುತ್ತದೆ ಎಂದರು.

ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಬಾಳೆಹೊನ್ನೂರು ಬಂಡಿಮಠದ 16 ನಿರಾಶ್ರಿತರಿಗೆ ಬದಲಿ ನಿವೇಶನ ಗುರುತಿಸಲಾಗಿದೆ. ಮರಗಳು ತೆರವಾಗಬೇಕಿದೆ. ಬಂಡಿಮಠದ ಜನರಿಗೆ ಬದಲಿ ಜಾಗಕ್ಕೆ ಮರಗಳನ್ನು ತೆರವುಗೊಳಿಸಿದ ಕೂಡಲೇ ಬೇಲಿ ಹಾಕಿ ನಾಮಲಕ ಅಳವಡಿಸಲಾಗುವುದು. ಆಡುವಳ್ಳಿ ಗ್ರಾಪಂ ಮೇಗರಮಕ್ಕಿಯಲ್ಲೂ ನಿವೇಶನಕ್ಕೆ ಜಾಗ ಮಂಜೂರಾಗಿದ್ದು, ಮರಗಳು ತೆರವಾಗಬೇಕು. ಗುಬ್ಬಿಗಾ ಗ್ರಾಪಂ ಅರಳಿಕೊಪ್ಪದಲ್ಲಿ ಆಶ್ರಯ ನಿವೇಶನದ ಲೇಔಟ್ ಮಾಡಲಾಗಿದ್ದು, ಸಾಮೂಹಿಕ ಶೌಚಗೃಹವನ್ನೂ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.

ಹಾವುಗೊಲ್ಲರಿಗೆ ನಿವೇಶನ ಹಂಚಿಕೆಗೆ ಜಾತಿ ಪ್ರಮಾಣ ಪತ್ರದ ತೊಡಕಾಗಿತ್ತು. ತಹಸೀಲ್ದಾರ್ ಅವರು ಹಾವುಗೊಲ್ಲರಿಗೆ ಪ್ರವರ್ಗ-1 ರಡಿ ಜಾತಿ ಪ್ರಮಾಣ ಪತ್ರ ವಿತರಿಸಿದ್ದಾರೆ. ನಿವೇಶನ ಹಂಚಿಕೆಗೆ ಕ್ರಮವಹಿಸಲಾಗುತ್ತಿದೆ. ಇನ್ನೆರಡು ಕುಟುಂಬಗಳಿಗೆ ಮಾತ್ರ ಜಾತಿ ಪ್ರಮಾಣ ಪತ್ರ ವಿತರಿಸಬೇಕಾಗಿದೆ. ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಆಶ್ರಯ ನಿವೇಶನದ ಲೇಔಟ್ ಆಗಿದ್ದು, ಗ್ರಾಮ ಸಭೆಯಲ್ಲಿ ಲಾನುಭವಿಗಳ ಆಯ್ಕೆಯೂ ಆಗಿದೆ ಎಂದು ತಿಳಿಸಿದರು.

ಎಲ್.ನಂದೀಶ್ ಮಾತನಾಡಿ, ಬಂಡಿಮಠದ ಬದಲಿ ನಿವೇಶನದ ಜಾಗದಲ್ಲಿನ ಮರಗಳನ್ನು ಕಡಿತಲೆ ಮಾಡಲಾಗಿದೆ. ಮರಗಳನ್ನು ತೆರವು ಮಾಡುವುದು ಬಾಕಿ ಇದೆ. ಮೇಗರಮಕ್ಕಿ ನಿವೇಶನದ ಲೇಔಟ್ ನಕ್ಷೆಯನ್ನು ನೀಡಿದಲ್ಲಿ ಅಗತ್ಯವಿರುವಲ್ಲಿ ಮಾತ್ರ ಮರಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಪಂಗಳ ಗ್ರಂಥಾಲಯಗಳಲ್ಲಿ ವಿಜ್ಞಾನಕ್ಕೆ ಪರಿಸರಕ್ಕೆ ಸಂಬಂಸಿದಂತಹ ಪುಸ್ತಕಗಳನ್ನೂ ಇಡಬೇಕು ಎಂದರು. ಇಒ ಎಚ್.ಡಿ.ನವೀನ್‌ಕುಮಾರ್ ಮಾತನಾಡಿ, ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಗುವಂತಹ ಪುಸ್ತಗಳನ್ನು ಇಡಲಾಗಿದೆ ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನಾಥ್ ಮಾತನಾಡಿ, 4612 ಎಚ್‌ಐವಿ ಪರೀಕ್ಷೆಗಳನ್ನು ನಡೆಸಲಾಗಿದೆ. ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಮಂಗನ ಕಾಯಿಲೆ 52 ಪ್ರಕರಣಗಳಲ್ಲಿ ಭೂತನಕಾಡು ಹಾಗೂ ಬಾಳೆಹೊನ್ನೂರು ಭಾಗಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ರಕ್ತ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಯಾವುದೇ ಪಾಸಿಟಿವ್ ಪ್ರಕರಣಗಳು ಬಂದಿಲ್ಲ. ಹಳ್ಳಿಗಾಡು ಪ್ರದೇಶದಲ್ಲಿನ ಜನರಿಗೆ ಡೆಾ ಆಯಿಲ್ ಮುನ್ನೆಚ್ಚರಿಕೆ ಕ್ರಮವಾಗಿ ಹಚ್ಚಿಕೊಳ್ಳಲು ವಿತರಿಸಲಾಗಿದೆ. ಕರೊನಾ ರೂಪಾಂತರಿ ವೈರಸ್ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಇಲಾಖೆಯಿಂದಾಗಲಿ, ಸರ್ಕಾರದಿಂದಾಗಲಿ ಇನ್ನೂ ಸ್ಪಷ್ಟ ಮಾರ್ಗದರ್ಶನ, ಸೂಚನೆ ಬಂದಿಲ್ಲ. ವೃದ್ಧರು, ಅಂಗವಿಕಲರು, ಗರ್ಭಿಣಿಯರು ಮಾಸ್ಕ್ ಧರಿಸುವುದು ಸೂಕ್ತ ಎಂದು ತಿಳಿಸಿದರು. ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಪಿಡಿಒಗಳು ಇದ್ದರು.

ಪಟ್ಟಣದ ಪೇಟೆ ಶಾಲೆಗೆ ಹೊಸ ಶೌಚಗೃಹ ನಿರ್ಮಿಸಲು ಜಾಗ ಇಲ್ಲ. ಇರುವ ಶೌಚಗೃಹ ದುರಸ್ತಿಗೆ ಅಂದಾಜುಪಟ್ಟಿಯನ್ನು ಮತ್ತೊಮ್ಮೆ ಸ್ಥಳ ಪರಿಶೀಲಿಸಿ ಸಲ್ಲಿಸಲಾಗುವುದು. ಮೆಣಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಳೆಹೊನ್ನೂರು ಪದವಿ ಪೂರ್ವ ಕಾಲೇಜು, ಪಟ್ಟಣದ ಕೆಪಿಎಸ್, ಮುತ್ತಿನಕೊಪ್ಪದ ಪ್ರೌಢಶಾಲೆ ಒಟ್ಟು ನಾಲ್ಕು ಕಡೆ ಶುದ್ಧ ಗಂಗಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ನೀರು ಸರಬರಾಜು ಮಾಡಿ, ಪರಿಶೀಲಿಸಿ ನಂತರ ಹಸ್ತಾಂತರಿಸಲಾಗುವುದು ಎಂದು ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ ಸಾಗರ್ ಸಭೆಗೆ ತಿಳಿಸಿದರು.

ಕಳೆದ ವರ್ಷಕ್ಕಿಂತ ಈ ಬಾರಿ ಅಧಿಕ ಮಳೆಯಾಗುತ್ತಿದೆ. 125 ಮಿ.ಮೀ ಮಳೆಯಾಗಬೇಕಿತ್ತು, ಆದರೆ 336 ಮಿ.ಮೀ ಮಳೆಯಾಗಿದೆ. ಕಳೆದ 7 ದಿನಗಳಲ್ಲಿ 16 ಮಿ.ಮೀ ಮಳೆಯಾಗಬೇಕಿತ್ತು. ಆದರೆ 179 ಮಿ.ಮೀ ಮಳೆಯಾಗಿದೆ. ಜೂನ್ ಮೊದಲ ವಾರದಿಂದ ಬಾಳೆಹೊನ್ನೂರು ಹೋಬಳಿ ಮತ್ತು ಎನ್.ಆರ್.ಪುರ ಕಸಬಾ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿಯಲ್ಲಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಬಿ.ಮಹೇಶ್ ತಿಳಿಸಿದರು. ಆಡಳಿತಾಧಿಕಾರಿ ಎಲ್.ನಂದೀಶ್ ಮಾತನಾಡಿ, ವರ್ಷ ಕಳೆದಂತೆ ಭತ್ತ ಬೆಳೆ ಪ್ರದೇಶ ವಿಸ್ತರಣೆ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ, ಪರಿಹಾರ ಏನೂ ಕ್ರಮ ಕೈಗೊಂಡಿಲ್ಲವೇ ಎಂದು ಪ್ರಶ್ನಿಸಿದರು. ಎಸ್.ಬಿ.ಮಹೇಶ್ ಮಾತನಾಡಿ, ಭತ್ತಕ್ಕೆ ಬೆಂಬಲ ಬೆಲೆ ಕಡಿಮೆಯಾಗಿರುವುದು, ವಾಣಿಜ್ಯ ಬೆಳೆಗಳತ್ತ ರೈತರು ಮುಖ ಮಾಡಿರುವುದು ಕಾರಣ ಎಂದರು. ಎಲ್.ನಂದಿಶ್ ಮಾತನಾಡಿ, ಭತ್ತ ದೇಶಕ್ಕೆ ಬೇಕಾದ ಆಹಾರದ ಪ್ರಮುಖ ಬೆಳೆಯಾಗಿದೆ. ಭತ್ತ ಬೆಳೆಯದೆ ಹೋದರೆ ಎದುರಾಗಬಹುದಾದ ಪರಿಣಾಮದ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಬಿಸಿಎಂ ಇಲಾಖೆಯ ಬಾಳೆಹೊನ್ನೂರು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಬಿ.ಎ.ವರ್ಷಿಣಿ 615 ಅಂಕಗಳು ಹಾಗೂ ಮೂಡಬಾಗಿಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ಎಚ್.ಕೆ.ನವ್ಯಾ 603 ಅಂಕಗಳನ್ನು ಪಡೆಯುವುದರ ಮೂಲಕ ಬಿಸಿಎಂ ಇಲಾಖೆಯಡಿ ಬರುವ 45 ವಸತಿ ನಿಲಯಗಳ ವಿದ್ಯಾರ್ಥಿಗಳ ಪೈಕಿ ಜಿಲ್ಲೆಗೇ ಟಾಪರ್ಸ್‌ಗಳಾಗಿದ್ದಾರೆ. ಬಿ.ಎ.ವರ್ಷಿಣಿಗೆ ಮೊದಲು 609 ಅಂಕಗಳು ಬಂದಿದ್ದು, ಮರು ಮೌಲ್ಯ ಮಾಪನದಲ್ಲಿ 615 ಅಂಕಗಳನ್ನು ಪಡೆದಿದ್ದಾಳೆ ಎಂದು ಬಿಸಿಎಂ ಇಲಾಖೆ ಅಧಿಕಾರಿ ರಮೇಶ್ ಸಭೆಗೆ ತಿಳಿಸಿದರು. ವಸತಿ ನಿಲಯಗಳ ದಾಖಲಾತಿಗೆ ಆನ್‌ಲೈನ್‌ನಲ್ಲಿ ಈಗ ಅವಕಾಶ ಕಲ್ಪಿಸಲಾಗಿದೆ ಎಂದರು.