ಜಿಲ್ಲೆ

ಆಶ್ರಯ ನಿವಾಸಿಗಳನ್ನು ಮರೆತ ಜಿಲ್ಲಾಡಳಿತ

ಸಂತೋಷ ವೈದ್ಯ ಹುಬ್ಬಳ್ಳಿ

ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ವಾಜಪೇಯಿ ನಗರ ಹಾಗೂ ಜಗದೀಶ ನಗರ ಆಶ್ರಯ ಬಡಾವಣೆಗಳ ನಿವಾಸಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ಜಿಲ್ಲಾ-ತಾಲೂಕು ಆಡಳಿತ ಯಂತ್ರ ಮಾತ್ರ ‘ಇವರು ನಮ್ಮವರಲ್ಲ’ ಎಂಬಂತಿದೆ. ಕನಿಷ್ಠ ಹಾಲು ಸಹ ಪೂರೈಕೆ ಮಾಡಿಲ್ಲ.

ಜಿಲ್ಲೆಯಲ್ಲಿ ಲಾಕ್​ಡೌನ್​ನಿಂದ ಸಂಕಷ್ಟದಲ್ಲಿರುವ ಕಡು ಬಡವರಿಗೆ, ನಿರ್ಗತಿಕರಿಗೆ, ಹೊರ ರಾಜ್ಯದವರಿಗೆ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ನೀಡಿ ಊಟ- ಉಪಾಹಾರ ನೀಡಲಾಗಿದೆ. ಕಳೆದೆರಡು ದಿನಗಳಿಂದ ಕೊಳೆಗೇರಿ ನಿವಾಸಿಗಳಿಗೆ ನಿತ್ಯ ಉಚಿತವಾಗಿ ಕೆಎಂಎಫ್​ನಿಂದ ಅರ್ಧ ಲೀಟರ್ (ಪ್ರತಿ ಮನೆಗೆ) ಹಾಲು ವಿತರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಶಾಸಕರು, ಹಿರಿ-ಕಿರಿ ರಾಜಕಾರಣಿಗಳು ಹಾಲು ವಿತರಣೆಯ ಫೋಟೋ ಕ್ಲಿಕ್ಕಿಸಿಕೊಂಡು ಬೀಗಿದ್ದಾರೆ. ಆಶ್ರಯ ನಿವಾಸಿಗಳಿಗೆ ಕನಿಷ್ಠ ಹಾಲಿಗೂ ಗತಿ ಇಲ್ಲ.

ವಾಜಪೇಯಿ ನಗರದಲ್ಲಿ 712 ಹಾಗೂ ಜಗದೀಶ ನಗರದಲ್ಲಿ 680 ಆಶ್ರಯ ಮನೆಗಳಿವೆ. ಒಂದಿಷ್ಟು ಮನೆಗಳು ವಸತಿಗೆ ಯೋಗ್ಯವಿಲ್ಲ. ಇನ್ನೊಂದಿಷ್ಟು ಮನೆಗಳಲ್ಲಿ ಜನ ವಸತಿ ಇಲ್ಲ. ಆದರೆ, ಶೇ. 75ರಿಂದ 80ರಷ್ಟು ಮನೆಗಳಲ್ಲಿ ಜನ ವಾಸ್ತವ್ಯವಿದೆ. ಬಹುತೇಕ ಎಲ್ಲರೂ ಕಡು ಬಡವರು. ನಿತ್ಯ ದುಡಿದು ತಿನ್ನುವವರು.

ಲಾಕ್​ಡೌನ್ ಹಿನ್ನೆಲೆಯಲ್ಲಿ ಕೆಲಸವೂ ಇಲ್ಲ. ಕೂಲಿಯೂ ಇಲ್ಲ. ಈ ಆಶ್ರಯ ಬಡಾವಣೆಗಳು ನಗರದ ಕೇಂದ್ರ ಸ್ಥಾನದಿಂದ 10 ಕಿ.ಮೀ. ದೂರದಲ್ಲಿದೆ. ಆದರೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೇ ಇದೆ.

ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ನಗರದಲ್ಲಿ ಮಾರುಕಟ್ಟೆ ಪ್ರದೇಶಗಳನ್ನು ಬಂದ್ ಮಾಡಿ ಮನೆ ಮನೆಗೆ ತರಕಾರಿ ಪೂರೈಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ನಗರದ ಸುಧಾರಿತ ಬಡಾವಣೆಗಳಲ್ಲಿ ನಿತ್ಯವೂ 8-10 ತರಕಾರಿ ಮಾರಾಟಗಾರರು ಬಂದು ಹೋಗುತ್ತಾರೆ. ಆದರೆ, ಇಲ್ಲಿ ವಾರದಲ್ಲಿ 2 ಬಾರಿ ಒಂದಿಬ್ಬರು ಮಾತ್ರ ತರಕಾರಿ ಮಾರುವವರು ಬಂದಿದ್ದಾರೆ. ನಗರ ಪ್ರದೇಶದಿಂದ ಹೊರವೆಂಬ ಕಾರಣಕ್ಕೆ ತರಕಾರಿ ಮಾರುವವರು ಬರುತ್ತಿಲ್ಲ.

‘ಮೊದಲು ಗೋಕುಲ ರಸ್ತೆ ಕೆಇಸಿ ಬಳಿ ವಾರದ ಸಂತೆಯಿಂದ ತರಕಾರಿ ತರುತ್ತಿದ್ದೆವು. ಇತ್ತೀಚೆಗೆ ಕೆಇಸಿ ಸಂತೆ ರದ್ದಾಗಿ ಅಕ್ಷಯ ಪಾರ್ಕ್ ಸಂತೆಗೆ ಹೋಗುತ್ತಿದ್ದೆವು. ಈಗ ಸಂತೆಯೂ ಇಲ್ಲ. ತರಕಾರಿ ಮಾರುವವರು ಬರುತ್ತಿಲ್ಲ. ಮನೆಯಲ್ಲಿ ಇದ್ದಷ್ಟನ್ನು ತಿನ್ನುತ್ತೇವೆ. ಅದು ಮುಗಿದ ಮೇಲೆ ದೇವರೇ ಗತಿ’ ಎಂದು ವಾಜಪೇಯಿ ನಗರ ಆಶ್ರಯ ಬಡಾವಣೆ ನಿವಾಸಿ ಮಹಾದೇವಿ ಹೊಸಮನಿ ವಿಜಯವಾಣಿ ಜತೆ ಅಳಲು ತೋಡಿಕೊಂಡರು.

ಪಡಿತರ ಬಂದಿಲ್ಲ: ಈ ಆಶ್ರಯ ಬಡಾವಣೆಗಳ ಶೇ. 75ರಷ್ಟು ನಿವಾಸಿಗಳಿಗೆ ರೇಶನ್ ಕಾರ್ಡ್-ವೋಟರ್ ಕಾರ್ಡ್ ಇಲ್ಲ. ಇದಕ್ಕೆ ಅಧಿಕಾರಿಗಳು ತಾಂತ್ರಿಕ ಕಾರಣ ಹೇಳುತ್ತಾರೆ. ರೇಶನ್ ಕಾರ್ಡ್ ಇರುವ ಇಲ್ಲಿಯ ನಿವಾಸಿಗಳು ಗೋಕುಲ ಹಾಗೂ ತಾರಿಹಾಳ ನ್ಯಾಯಬೆಲೆ ಅಂಗಡಿಗಳಿಗೆ ಹಂಚಿ ಹೋಗಿದ್ದಾರೆ. ಹುಬ್ಬಳ್ಳಿಯಲ್ಲಿ ಭಾನುವಾರವೇ 2 ತಿಂಗಳ ಪಡಿತರ ವಿತರಣೆ ಕಾರ್ಯ ಆರಂಭಗೊಂಡಿದೆ. ಆದರೆ, ಗೋಕುಲ ಮತ್ತು ತಾರಿಹಾಳದಲ್ಲಿ ಸೋಮವಾರವೂ ಪಡಿತರ ವಿತರಣೆಯಾಗಿಲ್ಲ.

ಆಹಾರ ಸಾಮಗ್ರಿ, ಮಾಸ್ಕ್ ವಿತರಣೆ ನಗರಕ್ಕೆ ಸೀಮಿತ: ಲಾಕ್​ಡೌನ್ ಹಿನ್ನೆಲೆಯಲ್ಲಿ ನಗರದ ಚನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ, ಗೋಕುಲ ರಸ್ತೆ, ಇತ್ಯಾದಿ ಕಡೆ ದಿನವೂ 8-10 ಸಂಘಟನೆಗಳು ಆಹಾರ ಸಾಮಗ್ರಿ, ಮಾಸ್ಕ್ ವಿತರಣೆ ಮಾಡುವುದು ಕಂಡು ಬರುತ್ತವೆ. ಆದರೆ, ವಾಜಪೇಯಿನಗರ ಹಾಗೂ ಜಗದೀಶನಗರ ಆಶ್ರಯ ಬಡಾವಣೆಗಳತ್ತ ಕಳೆದ 10-12 ದಿನಗಳಿಂದ ಯಾರೂ ಸುಳಿದಿಲ್ಲ. ದಾನಿಗಳು ನಗರದ ಮಧ್ಯವರ್ತಿ ಸ್ಥಳಗಳಿಗೆ ಸೀಮಿತವಾಗಿದ್ದಾರೆ. ಇಲ್ಲಿ ಜನ ವಾಸ್ತವ್ಯ ಇಲ್ಲವೆಂದು ಜಿಲ್ಲಾಡಳಿತ ತಿಳಿದುಕೊಂಡಂತಿದೆ.

ಗೋಕುಲ ನ್ಯಾಯಬೆಲೆ ಅಂಗಡಿಯಲ್ಲಿ ಸೋಮವಾರದಿಂದ ಪಡಿತರ ವಿತರಣೆ ಮಾಡಲಾಗುತ್ತಿದೆ. ತಾರಿಹಾಳದಲ್ಲಿ ಮಂಗಳವಾರದಿಂದ ವಿತರಣೆ ಮಾಡಲು ಕ್ರಮ ಕೈಗೊಂಡಿದ್ದೇವೆ. | ಮಂಜುನಾಥ ರೇವಣಕರ, ಸಹಾಯಕ ನಿರ್ದೇಶಕ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಹುಬ್ಬಳ್ಳಿ