ಜಿಲ್ಲೆ

ಆಶೀರ್ವಾದದಿಂದ ದಾಂಪತ್ಯ ಗಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ, ನವಯುಗ ಸಂಘಟನೆಯಿಂದ ಸಾಮೂಹಿಕ ವಿವಾಹ

ಹುಬ್ಬಳ್ಳಿ: ಸಾಮೂಹಿಕ ಮದುವೆಗಳು ನಡೆಯುವುದು ಭಾರತ ದೇಶದಲ್ಲಿ ಮಾತ್ರ, ಇಲ್ಲಿ ನಡೆಯುವ ಮದುವೆಗಳಲ್ಲಿ ದಂಪತಿಗಳಿಗೆ ಸ್ವಾಮೀಜಿಗಳ ಆಶೀರ್ವಾದ ಸಿಗುವುದರಿಂದ ಅವರ ದಾಂಪತ್ಯ ಹೆಚ್ಚು ಗಟ್ಟಿಯಾಗಿರುತ್ತದೆ. ಎಲ್ಲರಲ್ಲಿ ಕೂಡಿ ಬಾಳು ಸಂಪ್ರದಾಯ ಬೆಳೆಯುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇಲ್ಲಿಯ ಗೋಕುಲ ರಸ್ತೆ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಜಗದೀಶ ಶೆಟ್ಟರ್ ಮತ್ತು ಪ್ರಲ್ಹಾದ ಜೋಶಿ ಅಭಿಮಾನಿ ಬಳಗ ಹಾಗೂ ನವಯುಗ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಮತ್ತು ಉಪನಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತ ಹೊರತು ಪಡಿಸಿದರೆ ಬೇರೆ ದೇಶಗಳಲ್ಲಿ ಮದುವೆಗೆ ಮಹತ್ವ ಇರುವುದಿಲ್ಲ. ಕೆಲವೇ ದಿನಗಳಲ್ಲಿ ವಿಚ್ಛೆದನಗಳು ನಡೆಯುವುದನ್ನು ನಾವು ಕಾಣುತ್ತೇವೆ. ಭಾರತದಲ್ಲಿ ದಂಪತಿಗೆ ಜನ್ಮಜನ್ಮಾಂತರದ ಸಂಬಂಧವಿರುತ್ತದೆ. ಸಾಮೂಹಿಕ ವಿವಾಹದಲ್ಲಿ ಅವರಿಗೆ ಎಲ್ಲರ ಆಶೀರ್ವಾದವೂ ಲಭ್ಯವಾಗುತ್ತದೆ ಎಂದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ ಬೀಳಲಿದೆ. ಅಲ್ಲದೇ ಸಾರ್ವಜನಿಕರು, ಸ್ವಾಮೀಜಿಗಳ ಆಶೀರ್ವಾದ ನವವಧು ವರರಿಗೆ ಸಿಗುತ್ತದೆ ಎಂದರು.

ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ವರದಕ್ಷಿಣೆಯಂತಹ ಪಿಡುಗು ದೂರ ಮಾಡಬಹುದು. ಗಂಡು ವರದಕ್ಷಿಣೆ ಪಡೆದರೆ ಜೀವನಪರ್ಯಂತ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳಿದರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿಯವರು ಆಶೀರ್ವಚನ ನೀಡಿದರು. 44 ಜೋಡಿಗಳ ಸಾಮೂಹಿಕ ಮದುವೆ ಹಾಗೂ 9 ವಟುಗಳಿಗೆ ಉಪನಯನ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಉಪ ಮೇಯರ್ ಉಮಾ ಮುಕುಂದ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಸಂಕಲ್ಪ ಶೆಟ್ಟರ್, ಮಹೇಶ ದ್ಯಾವಪ್ಪನವರ, ಸುಭಾಸಸಿಂಗ್ ಜಮಾದಾರ, ಇತರರು ಉಪಸ್ಥಿತರಿದ್ದರು.

ನವಯುಗ ಸಂಘಟನೆಯ ಅಧ್ಯಕ್ಷ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾ ಗಂಡಗಾಳೇಕರ, ಅವಿನಾಶ ಹರಿವಾಣ, ರವಿ ಬಂಕಾಪುರ, ವಿಜಯ ಬಿ, ಲೀಲಾವತಿ ಪಾಸ್ತೆ, ಬಲಭೀಮ ಪೋದ್ದಾರ, ಸಿದ್ದೇಶ ಕಬಾಡದ, ಮಹೇಶ ಪತ್ತಾರ, ವಿದ್ಯಾ ನರಸಪ್ಪನವರ, ರೇಖಾ ಸಜ್ಜನ, ಅಮರ, ವಿವೇಕ ಜಿಗಳೂರ, ಶರಣು ಪಾಟೀಲ, ಮುಂತಾದವರು ನೇತೃತ್ವ ವಹಿಸಿದ್ದರು.

---