ಜಿಲ್ಲೆ

ಆಶಾಕಿರಣ ದೃಷ್ಟಿ ಕೇಂದ್ರಕ್ಕೆ ಚಾಲನೆ

ಸರಗೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ಅಂಧತ್ವ ನಿವಾರಣೆಗಾಗಿ ಇಂದಿನಿಂದ ರಾಜ್ಯಾದ್ಯಂತ 393 ಕೇಂದ್ರಗಳಲ್ಲಿ ಆಶಾಕಿರಣ ದೃಷ್ಟಿ ಕೇಂದ್ರಗಳನ್ನು ಉದ್ಘಾಟಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು.

ತಾಲೂಕಿನ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಆಶಾ ಕಿರಣ ದೃಷ್ಟಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯಾದ್ಯಂತ ಏಕಕಾಲದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರಗಳನ್ನು ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಮೊದಲಿಗೆ ಆಶಾಕಾರ್ಯಕರ್ತೆಯರು ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ದಿನ ನಿತ್ಯದ ಚಟುವಟಿಕೆಯಲ್ಲಿ ಮನೆಗಳಿಗೆ ಭೇಟಿ ನೀಡಿ ಪ್ರಾಥಮಿಕ ತಪಾಸಣೆ ಮಾಡುತ್ತಾರೆ. ತಪಾಸಣೆಯಲ್ಲಿ ಶಂಕಿತ ಪ್ರಕರಣಗಳು ಕಂಡು ಬಂದಲ್ಲಿ ಹೆಚ್ಚಿನ ತಪಾಸಣೆಗೆ ಹತ್ತಿರದ ದೃಷ್ಟಿ ಕೇಂದ್ರಗಳಿಗೆ ಕಳಿಸುವುದು, ಅಗತ್ಯ ಚಿಕಿತ್ಸೆಗೆ ನೆರವು ಮಾಡಿಕೊಡಲಾಗುವುದು ಎಂದರು.

ಸರಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಟ್ಟು 1470 ಕನ್ನಡಕಗಳು ಬಂದಿವೆ. ಇದರಲ್ಲಿ 1092 ಫಲಾನುಭವಿಗಳಿಗೆ ಕನ್ನಡಕ ವಿತರಣೆ ಮಾಡಿದ್ದೇವೆ. ಇನ್ನುಳಿದ 378 ಕನ್ನಡಕಗಳನ್ನು ನೀಡಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ತಾಲೂಕಿನಲ್ಲಿ ಈ ರೀತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮ. ಪಟ್ಟಣ ಮತ್ತು ಸುತ್ತಮುತ್ತಲಿನ ಜನರು ಕಣ್ಣಿನ ತಪಾಸಣೆ ಮಾಡಿಸಿಕೊಂಡು ಅಗತ್ಯವಿದ್ದಲ್ಲಿ ಕನ್ನಡಕಗಳನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವೀರೇಶ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಭಾಗ್ಯಲಕ್ಷ್ಮೀ, ವೈದ್ಯಾಧಿಕಾರಿ ಡಾ.ಸುಜಾತಾ, ನೇತ್ರಾಧಿಕಾರಿ ಗಿರೀಶ್, ಕಚೇರಿ ಅಧೀಕ್ಷಕ ವಿಜಯ ರಾಘವ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಿಬ್ಬಂದಿ ರವಿರಾಜ್, ಅರ್ಚನಾ, ರೇಖಾ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಹರೀಶ್ ನಿಲವಾಗಿಲು, ಜಗದೀಶ್, ಹರೀಶ್, ಮಹೇಶ್, ಪುಷ್ಪಾ, ಶಾಂತಿ, ಮಹಾದೇವ, ಮಹದೇವಸ್ವಾಮಿ, ಚಂದ್ರ ಹಾಜರಿದ್ದರು.