ಹಾಸನ: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ವಿವಿಧ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಮಹಾರಾಜ ಪಾರ್ಕಿನಿಂದ ಮೆರವಣಿಗೆಯಲ್ಲಿ ಬಂದ ನೂರಾರು ಆಶಾ ಕಾರ್ಯಕರ್ತೆಯರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ಸೇವೆಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹ ಧನವು ಆರ್‌ಸಿಹೆಚ್ ಪೋರ್ಟಲ್‌ಗೆ ಲಿಂಕ್ ಆಗಿದ್ದು, ಇದರಿಂದ ಸಂಪೂರ್ಣ ಪ್ರೋತ್ಸಾಹ ಧನ ಕಾರ್ಯಕರ್ತೆಯರಿಗೆ ತಲುಪುತ್ತಿಲ್ಲ. ಮೊಬೈಲ್ ಆಧಾರಿತ ಕೆಲಸ ನೀಡಲಾಗಿದ್ದು, ಮೊಬೈಲ್‌ಗಳು ಹಳೆಯದಾಗಿದ್ದು ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ ಎಂದರು.
ಆಶಾ ಕಾರ್ಯಕರ್ತೆಯರ ಕುಂದು ಕೊರತೆ ಆಲಿಸಲು ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂಬ ನಿಯಮವಿದ್ದರೂ ಜಿಲ್ಲೆಯಲ್ಲಿ ಪಾಲನೆಯಾಗುತ್ತಿಲ್ಲ. ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ಆಶಾ ನಿಧಿಯ ಮೂಲಕ ಪಡೆಯುವ ವಿವಿಧ ಚಟುವಟಿಕೆಗಳ ಪ್ರೋತ್ಸಾಹಧನಗಳನ್ನು ಒಟ್ಟುಗೂಡಿಸಿ ಮಾಸಿಕ 15 ಸಾವಿರ ರೂ. ಒಂದೇ ಸಲ ನೀಡಬೇಕು ಎಂದು ಆಗ್ರಹಿಸಿದರು.
ಗೌರವಧನ ಇಲ್ಲದೆ ಯಾವುದೇ ಪರೀಕ್ಷೆ ಹಾಗು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಬಾರದು. ಅನಗತ್ಯ ಸರ್ವೆ ಹಾಗು ಕಾರ್ಯಕ್ರಮಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಬಾರದು. ಕೆಲಸದಿಂದ ಸ್ಥಳದಿಂದ ಜಿಪಿಎಸ್ ಲೋಕೇಶನ್ ಫೋಟೋ ಕಳಿಸಬೇಕೆಂಬ ಕಾನೂನು ತೆಗೆದು ಹಾಕಬೇಕು. ಹೀಗೆ 13 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಪಂ ಸಿಇಓ ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ಒಂದು ವಾರದಲ್ಲಿ ಆಶಾ ಕಾರ್ಯಕರ್ತೆಯರ ಮುಖಂಡರ ಸಭೆ ಕರೆಸು ಸ್ಥಳೀಯವಾಗಿ ಬಗೆಹರಿಸಬಹುದಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕಾರ್ಯಗಳ ಕುರಿತು ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಸಾಹಿತಿ ರೂಪ ಹಾಸನ, ಸಂಘದ ಅಧ್ಯಕ್ಷೆ ಮಮತಾ, ಜಿಲ್ಲಾ ಸಲಹೆಗಾರ ಜಿ.ಹನುಮೇಶ್, ಕಾರ್ಯದರ್ಶಿ ಪುಷ್ಪಲತಾ ಇತರರು ಇದ್ದರು.