ಬಾಗಲಕೋಟೆ: ಪ್ರೋತ್ಸಾಹ ಧನ ಸೇರಿಸಿ ಕನಿಷ್ಠ ೧೦ ಸಾವಿರ ರೂ. ಗೌರವ ಧನ ಎಪ್ರೀಲ್‌ನಿಂದ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಆರೋಗ್ಯ ಸೇವೆ ಪ್ರಮಾಣಿಕತೆಯಿಂದ ಮಾಡುವ ಆಶಾ ಕಾರ್ಯಕರ್ತೆಯರು ನಿತ್ಯವು ಸಂಕಟದಲ್ಲಿ ಜೀವನ ನಡೆಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪ್ರಾಣ ಪಣಕ್ಕೆ ಇಟ್ಟು ಸೇವೆ ಸಲ್ಲಿಸಿದ್ದಾರೆ. ಆದರು ಸರ್ಕಾರ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲ. ಸರ್ಕಾರದ ಎಲ್ಲ ಯೋಜನೆಗಳನ್ನು ಯಶಸ್ವಿಗೊಳಿಸು ಆಶಾಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗೌರವ ಧನ ಹೆಚ್ಚಳ ಮಾಡುವುದರ ಜೊತೆಗೆ ಬಜೆಟ್‌ನಲ್ಲಿ ೧೦೦೦ ರೂ. ವೇತನ ಹೆಚ್ಚಳ ಮಾಡಿ ಆದೇಶಿಸಬೇಕು. ಈ ಹಿಂದೆ ಪ್ರೀಡಂ ಪಾರ್ಕನಲ್ಲಿ ಹೋರಾಟ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಆಶಾಗಳಿಗೆ ಎಲ್ಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವ ಅಧ್ಯಕ್ಷೆ ಅಂಜನಾ ಕುಂಬಾರ, ಜಿಲ್ಲಾಧ್ಯಕ್ಷೆ ಶೀಲಾ ಮೆಳ್ಳಿಗೇರಿ, ಮುಖಂಡರಾದ ಸುರೇಖಾ ಕಾಳೆ, ಶೀವಲಿಲಾ ಭಜಂತ್ರಿ, ದ್ರಾಕ್ಷಾಯಣಿ ಹಿರೇಮಠ, ಉಮಾದೇವಿ ಸುಲಾಖೆ, ಪಾರ್ವತಿ ಕಟ್ಟೆನವರ ಇತರರು ಇದ್ದರು.