ಹನೂರಿನ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಡಾ. ತಿಪ್ಪೇಸ್ವಾಮಿ ವೀಕ್ಷಿಸಿದರು. ಮಧುಸೂದನ್, ಸತ್ಯಪ್ರಿಯ, ನಾಗೇಂದ್ರ, ಐಶಾ ಇತರರಿದ್ದರು. 
ಜಿಲ್ಲೆ

ಆವಿಷ್ಕರಿಸುವ ಮನೋಭಾವ ಬೆಳೆಯಲಿ

ಹನೂರು: ಪ್ರತಿಯೊಬ್ಬರೂ ಅವಿಷ್ಕರಿಸುವ ಹಾಗೂ ಸಂಶೋಧಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಮೈಸೂರಿನ ಸಿಎಸ್‌ಟಿಆರ್‌ಐಟಿ ನಿವೃತ್ತ ವಿಜ್ಞಾನಿ ಡಾ.ತಿಪ್ಪೇಸ್ವಾಮಿ ತಿಳಿಸಿದರು.

ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನಿ ಸರ್ ಸಿ.ವಿ ರಾಮನ್ ಅವಿಷ್ಕಾರದ ಸ್ಮರಣಾರ್ಥ ಜೀವನದಲ್ಲಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಪ್ರತಿ ವರ್ಷ ಫೆ.28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲೇ ಪ್ರತಿಯೊಬ್ಬರೂ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಬೇಕು. ಇದರಿಂದ ಚಿಂತನಾ ಸಾಮರ್ಥ್ಯ ವೃದ್ಧಿಸುವುದರ ಜತೆಗೆ ಪ್ರಶ್ನಿಸುವ, ಅವಿಷ್ಕರಿಸುವ ಪ್ರವೃತ್ತಿ ಬೆಳೆಯುತ್ತದೆ. ಜತೆಗೆ ಸಂಶೋಧನೆಗೆ ದಾರಿ ಮಾಡಿಕೊಡುತ್ತದೆ. ಸಾಧನೆಗೈಯ್ಯಲು ಸಹಕಾರಿಯಾಗುತ್ತದೆ ಎಂದರು.

ಬಳಿಕ ಆಯೋಜಿಸಲಾಗಿದ್ದ ವಿವಿಧ ಮಾದರಿಯ ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳಿಂದ ಪ್ರಾಯೋಗಿಕವಾಗಿ ಮಾಹಿತಿ ಪಡೆಯಲಾಯಿತು. ಉತ್ತಮ ಸ್ಪಂದನೆ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಮಧುಸೂದನ್, ಮುಖ್ಯ ಶಿಕ್ಷಕಿ ಸತ್ಯಪ್ರಿಯ, ಸಂಯೋಜಕ ನಾಗೇಂದ್ರ, ಉಪನ್ಯಾಸಕಿ ಐಶಾ ಇತರರಿದ್ದರು.