ಜಿಲ್ಲೆ

ಆವನಿ ಮಠಕ್ಕೆ ಶ್ರೀ ಶಾಂತಾನಂದಭಾರತೀ ಮಹಾಸ್ವಾಮೀಜಿ ಉತ್ತರಾಧಿಕಾರಿ : ಶ್ರೀ ವಿಧುಶೇಖರಭಾರತಿ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ

ಮುಳಬಾಗಿಲು: ಆವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಮಠದ ನೂತನ ಪೀಠಾಧ್ಯಕ್ಷರಾಗಿ ಶ್ರೀಶಾಂತಾನಂದಭಾರತೀ ಮಹಾಸ್ವಾಮೀಜಿ ಗುರುವಾರ ಬೆಳಗ್ಗೆ 10.45ಕ್ಕೆ ಸಿಂಹಲಗ್ನದಲ್ಲಿ ಅನಂತಶ್ರೀ ವಿಭೂಷಿತ ಶೃಂಗೇರಿ ಜಗದ್ಗುರು ವಿಧುಶೇಖರಭಾರತೀ ಮಹಾಸ್ವಾಮೀಜಿ ಆಶೀರ್ವಾದದೊಂದಿಗೆ ಪಟ್ಟಾಭಿಷಕ್ತರಾಗಿ ಪೀಠಾರೋಹಣ ಮಾಡಿದರು.

ಶ್ರೀವಿಧುಶೇಖರಭಾರತಿ ಮಹಾಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಬೆಳಗ್ಗೆ ಪಟ್ಟಾಭಿಷೇಕಾಂಗ ಹೋಮ, ಪೂರ್ಣಾಹುತಿ, ಸಿಂಹ ಲಗ್ನದಲ್ಲಿ ಮಂಗಲಾಷ್ಟಕ ಪಠಣ, ಸಿಂಹಾಸನಾರೋಹಣ ನೆರವೇರಿತು. ಶ್ರೀ ಶಾಂತಾನಂದಭಾರತೀ ಸ್ವಾಮೀಜಿ ಪಟ್ಟಾಭಿಷೇಕಕ್ಕೂ ಮೊದಲು ಶ್ರೀ ಆವನಿ ಶೃಂಗೇರಿ ಮಠದ ಸ್ವಾಮಿಗಳಿಂದ ಜಗದ್ಗುರು ಮಹಾಸ್ವಾಮಿಗಳಿಗೆ ಪಾದಪೂಜೆ ಹಾಗೂ ಭಿಕ್ಷಾವಂದನ ಸಮರ್ಪಣೆ ಮಾಡಲಾಯಿತು.

ಆದಿಗುರು ಶಂಕರಾಚಾರ್ಯರು 1300 ವರ್ಷಗಳ ಹಿಂದೆಯೇ ಧರ್ಮರಕ್ಷಣೆ ಹಾಗೂ ಪ್ರಚಾರಕ್ಕಾಗಿ ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸಿದ್ದು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಪಟ್ಟಾಭಿಷೇಕ ಸಮಾರಂಭದಲ್ಲಿ ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

ಪ್ರಾಚಿನ ಕಾಲದ ಆಚರಣೆ ಸಂಪ್ರದಾಯಗಳನ್ನು ಯಥಾವತ್ತಾಗಿ ಮುಂದುವರೆಸುವುದು ಧರ್ಮ ರಕ್ಷಣೆ ಎನ್ನಾಲಾಗುತ್ತದೆ. ಜನರು ನೆಮ್ಮದಿಯಿಂದ ಸುಖ&ಶಾಂತಿಯಿಂದ ಜೀವನ ನಡೆಸಲು ಧರ್ಮಪಾಲನೆ ಮತ್ತು ಧರ್ಮ ರಕ್ಷಣೆಯಾದಾಗ ಮಾತ್ರ ಸಾಧ್ಯ ಎಂದರು.

ಮಠದ ಪೀಠಾಧಿಪತಿಗಳನ್ನಾಗಿ ಸನ್ಯಾಸಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅವರು ಎಲ್ಲವನ್ನು ಪರಿತ್ಯಾಗ ಮಾಡಿರುತ್ತಾರೆ. ಅಲ್ಲದೆ ರಾಗ-ದ್ವೇಷ ಅಸೂಯೆಗಳನ್ನು ಬಿಟ್ಟು ಸಮಾಜದ ಶಾಂತಿ ಕಾಪಾಡುವ ಕರ್ತವ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಆದ್ದರಿಂದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ತ ನಂತರ ಸನ್ಯಾಸಶ್ರಾಮ ತುಂಬ ಪಾವಿತ್ರ$್ಯತೆ ಪಡೆದುಕೊಂಡಿರುತ್ತದೆ ಎಂದು ತಿಳಿಸಿದರು.

ಪಟ್ಟಾಭಿಷೇಕ ಹಿನ್ನೆಲೆ ಶ್ರೀರಂಗಪಟ್ಟಣದ ಶ್ರೀ ಭಾನುಪ್ರಕಾಶ್​ಶರ್ಮ ನೇತೃತ್ವದಲ್ಲಿ ಅರ್ಚಕವೃಂದದಿಂದ ಗುರುವಾರ ಮಠದಲ್ಲಿ ವಿವಿಧ ಹೋಮ, ಯಜ್ಞಯಾಗಾದಿಗಳು ನೇರವೇರಿದವು. ಶ್ರೀಮಠದ ಭಕ್ತಾಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಮುನಿರತ್ನ, ಎಸ್​ಪಿ ದೇವರಾಜ್​, ಶೃಂಗೇರಿ ಶಾರದ ಪೀಠದ ಆಡಳಿತ ಅಧಿಕಾರಿ ಡಾ.ವೇ.ರಾ.ಗೌರಿಶಂಕರ್​, ಆವನಿ ಶೃಂಗೇರಿ ಮಠದ ಪಟ್ಟಾಭಿಷೇಕ ಸಮಿತಿ ಅಧ್ಯಕ್ಷರಾದ ಹೈಕೋರ್ಟ್​ ನಿವೃತ್ತ ನ್ಯಾಯಾಧೀಶ ಎನ್​.ಕುಮಾರ್​, ಮಠದ ಟ್ರಸ್ಟಿ ರಾಜ್ಯ ಬ್ರಾಹ್ಮಣದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಚ್​.ಎಸ್​.ಸಚ್ಚಿದಾನಂದಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.