ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯ ಅನೇಕ ಪ್ರವಾಸಿ ತಾಣಗಳ ಪೈಕಿ ಒಂದಾಗಿರುವ ಆವತಿಬೆಟ್ಟದ ಅಭಿವೃದ್ಧಿಯತ್ತ ಜಿಲ್ಲಾಡಳಿತದ ಚಿತ್ತ ಹರಿದಂತಿದೆ..!
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ವಂಶಸ್ಥ ರಣಭೈರೇಗೌಡರ ಕರ್ಮಭೂಮಿ ಎನಿಸಿರುವ ಬೆಟ್ಟ ಇದುವರೆಗೂ ಅಭಿವೃದ್ಧಿ ಕಂಡಿಲ್ಲ ಎಂಬ ಅಸಮಾಧಾನ ದಶಕಗಳಿಂದಲೂ ಹೊಗೆಯಾಡುತ್ತಿದೆ. ಏತನ್ಮಧ್ಯೆ ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲು ಜಿಲ್ಲೆಯಲ್ಲಿ ಆವತಿ ಬೆಟ್ಟ ಆಯ್ಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿ ಪ್ರವಾಸಿಗರನ್ನು ಸೆಳೆಯಲಿದೆ ಎಂಬ ನಿರೀಕ್ಷೆ ಹುಟ್ಟುಹಾಕಿದೆ.
ಐತಿಹಾಸಿಕ ಕುರುಹು ಹೊಂದಿರುವ ಸುಮಾರು 44 ಎಕರೆ ವಿಸ್ತೀರ್ಣದಲ್ಲಿರುವ ಬೆಟ್ಟದ ಅಭಿವೃದ್ಧಿ ಬಗ್ಗೆ ಜಿಲ್ಲೆಯ ಜನರು ಈ ಹಿಂದಿನಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಕೇಂದ್ರ ಸರ್ಕಾರ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಸಂರಕ್ಷಣಾ ಇಲಾಖೆ ತಂಡ ಇಡೀ ಬೆಟ್ಟದಲ್ಲಿರುವ ಕುರುಹುಗಳನ್ನು ಸಂಗ್ರಹಿಸಿ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡಿತ್ತು ಎನ್ನಲಾಗಿದೆ. ಇದರಲ್ಲಿ ರಣಭೈರೇಗೌಡರ ಇತಿಹಾಸ ಕುರಿತ ಅನೇಕ ಕುರುಹುಗಳ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಆಸಕ್ತಿ ವಹಿಸಿದ ಸರ್ಕಾರ ಆವತಿ ರಣಭೈರೇಗೌಡರ ಕರ್ಮಭೂಮಿ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಿದೆ.
ಭರವಸೆ ಹುಸಿಯಾಗಿದೆ: ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣಭೈರೇಗೌಡ ಆವತಿ ಗ್ರಾಮದಿಂದ ಕೆಂಪೇಗೌಡ ಜ್ಯೋತಿ ಜಾಥಾಕ್ಕೆ ಚಾಲನೆ ನೀಡಿ 1 ಕೋಟಿ ರೂ.ವೆಚ್ಚದಲ್ಲಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಎಂ.ವೀರಪ್ಪ ಮೊಯ್ಲಿ ಸಂಸದರಾಗಿದ್ದಾಗ ಕೆಂಪೇಗೌಡರ ವಂಶಸ್ಥರ ನೆನಪಿಗಾಗಿ ವಸ್ತು ಸಂಗ್ರಹಾಲಯ ಆರಂಭಿಸಿ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು, ಆದರೆ, ಇದುವರೆಗೂ ಅಭಿವೃದ್ಧಿ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಬೇಸರವಾಗಿದೆ.
ಬೆಟ್ಟದ ಪೂರ್ವ ಪಶ್ಚಿಮ, ಉತ್ತರಾಭಿಮುಖವಾಗಿ ಮೂರು ದಿಕ್ಕಿನಲ್ಲಿ ದೇವಸ್ಥಾನಗಳಿವೆ. ಬೆಟ್ಟದ ಮೇಲೆ ಇತಿಹಾಸ ಸಾರುವ ಅನೇಕ ಕುರುಹುಗಳು ಇವೆ. ಮುದ್ದೆ ಆಕಾರದ ಬಂಡೆ ಸೇರಿ ಅನೇಕ ಜೀವ ವೈವಿಧ್ಯ ಸಸ್ಯ ಸಂಕುಲಗಳಿವೆ. ಪ್ರವಾಸೋದ್ಯಮಕ್ಕೆ ಅರ್ಹವಾಗಿರುವ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕೆಂಬುದು ಹಲವು ದಶಕಗಳ ಬೇಡಿಕೆಯಾಗಿದೆ.
30ಕ್ಕೆ ದಿನಾಚರಣೆ: ಸೆ.30ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಎಂಬ ಸಂದೇಶದಡಿ ಆವತಿ ಬೆಟ್ಟದಲ್ಲಿ ಬೋಟಿಂಗ್, ಟ್ರಕ್ಕಿಂಗ್ ಮತ್ತಿತರ ಕ್ರೀಡಾಚಟುವಟಿಕೆ ಆಯೋಜಿಸುವ ಬಗ್ಗೆ ಜಿಲ್ಲಾಡಳಿತ ಚಿಂತಿಸಿದ್ದು, ಈ ಕುರಿತು ಈಗಾಗಲೇ ಸುತ್ತೋಲೆ ಹೊರಡಿಸಿದೆ. ಅಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಪಿ.ಚೆಲುವಾಂಬ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಆವತಿ ಬೆಟ್ಟದ ಅಭಿವೃದ್ಧಿ ಕುರಿತು ಸಲಹೆ ಸೂಚನೆಗಳನ್ನು ಪಡೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಈಗಾಗಲೇ ಮಾಕಳಿ, ಆವತಿಬೆಟ್ಟದ ಅಭಿವೃದ್ಧಿಗಾಗಿ ಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ ಮತ್ತೆ ಕೆಲ ಪ್ರವಾಸಿತಾಣಗಳ ಅಭಿವೃದ್ಧಿ ಸಂಬಂಧ ಚಿಂತನೆ ನಡೆದಿದೆ. ಪ್ರವಾಸೋದ್ಯಮ ದಿನದ ಅಂಗವಾಗಿ ಮಕ್ಕಳಿಗೆ ಟ್ರಕ್ಕಿಂಗ್, ಬೋಟಿಂಗ್ ಮತ್ತಿತರ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸಬೇಕೆಂಬ ನಿಟ್ಟಿನಲ್ಲಿ ಇಲಾಖೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಆವತಿ ಬೆಟ್ಟದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಣೆಗೆ ಸಿದ್ಧತೆ ನಡೆಸಿದ್ದೇವೆ, ಅಂದು ಕೆಲವು ಕ್ರೀಡಾಚಟುವಟಿಕೆ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ಅವರ ಆದೇಶದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪಿ.ಚೆಲುವಾಂಬ, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ ಬೆಂ.ಗ್ರಾಮಾಂತರ