ಮೈಸೂರು: ಆಧುನಿಕ ಯುಗದಲ್ಲೂ ದೇಶದಲ್ಲಿ ಜಾತಿ, ಲಿಂಗ, ವರ್ಗ ಮತ್ತ ವರ್ಣ ತಾರತಮ್ಯ ತಾಂಡವವಾಡುತ್ತಿದೆ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಕಳವಳ ವ್ಯಕ್ತಪಡಿಸಿದರು.
ಸಂವಹನ ಪ್ರಕಾಶನ ಮತ್ತು ಮಾಧವ ಪ್ರಕಾಶನ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯಭವನದಲ್ಲಿ ಭಾನುವಾರ ಆಯೋಜಿಸಿದ್ದ ಜಾನಪದ ವಿದ್ವಾಂಸ ಸ.ಚ.ಮಹದೇವನಾಯಕ ಅವರ 4 ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ, ಲಿಂಗ ತಾರತಮ್ಯ ನಿವಾರಣೆಯಾಗಿಲ್ಲ. ಬದಲಿಗೆ ಇನ್ನಷ್ಟು ಆಳವಾಗಿ ಬೇರೂರಿದೆ. ದಲಿತ ಎಂಬ ಕಾರಣಕ್ಕೆ ಈ ಹಿಂದಿನ ರಾಷ್ಟ್ರಪತಿ ಅವರನ್ನು ದೇವಸ್ಥಾನದ ಒಳಗೆ ಬಿಟ್ಟಿರಲಿಲ್ಲ. ಅನ್ಯ ಧರ್ಮೀಯರನ್ನು ಮದುವೆಯಾದರು ಎಂಬ ಕಾರಣಕ್ಕೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರಿಗೂ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ದ್ರೌಪತಿ ಮುರ್ಮು ಅವರನ್ನು ರಾಷ್ಟ್ರಪತಿ ಎಂದು ಕರೆಯುತ್ತಾರೆ. ಏಕೆ ರಾಷ್ಟ್ರಾಧ್ಯಕ್ಷರು ಎಂದು ಕರೆಯಲು ಆಗಲ್ಲ ಎಂದು ಪ್ರಶ್ನಿಸಿದರು.
ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವ ಸಂದೇಶದಂತೆ ವಿಶ್ವಮಾನವರಾದರು. ಆದರೆ, ಇಂದು ಅವರ ಶಿಷ್ಯಂದಿರು ಜಾತಿ-ಧರ್ಮದ ವಾದಿಗಳಾಗಿ ಅವಿವೇಕತನ ಪ್ರದರ್ಶಿಸುತ್ತಿದ್ದಾರೆ. ತಾರತಮ್ಯದ ಚಾತುರ್ವರ್ಣ ಸಾಮಾಜಿಕ ಪದ್ಧತಿಯ ಸೃಷ್ಟಿಕರ್ತರು ಮನುಷ್ಯರು. ಆದರೆ, ದೇವರು ಸೃಷ್ಟಿಸಿದರು ಎಂದು ಹೇಳುತ್ತಾರೆ ಎಂದರು.
ವಿಜ್ಞಾನ-ತಂತ್ರಜ್ಞಾನವನ್ನು ಸಮಾಜದ ಶ್ರೇಯೋಭಿವೃದ್ಧಿಗೆ ಉಪಯೋಗಿಸಿದರೆ ಸಾಮಾಜಿಕ ಸ್ವಾಸ್ಥೃ ಬೇರೂರುತ್ತದೆ. ಇಲ್ಲವಾದರೆ, ಇದಕ್ಕೆ ವ್ಯತರಿಕ್ತ ಸನ್ನಿವೇಶ ನಿರ್ಮಾಣವಾಗುತ್ತದೆ. ಮನುಕುಲಕ್ಕೆ ಜಾಗೃತಿ ಮೂಡಿದಾಗ ವಿಶ್ವಕುಲ ರಚನೆಯಾಗಲಿದೆ. ಈಗಾಗಲೇ ಎರಡು ಮಹಾಯುದ್ಧ ಘಟಿಸಿವೆ. ಭವಿಷ್ಯದಲ್ಲಿ ಏನಾದರೂ ಯುದ್ಧ ನಡೆದಾಗ ಮನುಷ್ಯನಿಗೆ ಜ್ಞಾನೋದಯವಾಗಬಹುದು ಎಂದು ಹೇಳಿದರು.
ಪ್ರಕಾಶಕ ಡಿ.ಎನ್.ಲೋಕಪ್ಪ ಮಾತನಾಡಿ, ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ, ಕೃತಿಗಳನ್ನು ಮುದ್ರಿಸುವ ಪ್ರಕಾಶಕರ ಸಂಖ್ಯೆ ಹೆಚ್ಚಾಗಿದೆ ಎಂದರು.
ಸ.ಚ.ಮಹದೇವನಾಯಕ ಅವರ ‘ಬದುಕಿನ ಕನ್ನಡಿ’, ‘ಮುಗಿಯದ ಕಥೆ’ ಮತ್ತು ‘ಇತರೆ ಕಥೆಗಳು’, ‘ಮಲ್ಲಿಗೆಯ ಬನದಲ್ಲಿ’, ‘ಗಡಿನಾಡಿನ ಬೇಟೆ’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದ ಪ್ರಾಧ್ಯಾಪಕ ಡಾ.ನಂಜಯ್ಯ ಹೊಂಗನೂರು, ಲೇಖಕ ಸ.ಚ.ಮಹದೇವ ನಾಯಕ, ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಇತರರು ಇದ್ದರು.