ಜಿಲ್ಲೆ

ಆಳಂದಗೂ ವಕ್ಕರಿಸಿತು ಕರೊನಾ

ಆಳಂದ: ತಾಲೂಕು ಕೇಂದ್ರ ಆಳಂದನಲ್ಲಿ ಮೊದಲ ಕರೊನಾ ಸೋಂಕಿತ ಪ್ರಕರಣ ಪತ್ತೆಯಾಗಿದೆ. 57 ವರ್ಷದ ವ್ಯಕ್ತಿಗೆ ತೀವ್ರ ಉಸಿರಾಟದ ತೊಂದರೆ ಇದ್ದು, ಈತನ ರಕ್ತ ಮತ್ತು ದ್ರವ ಪರೀಕ್ಷಿಸಿದಾಗ ಸೋಂಕು ಇರುವುದು ಪತ್ತೆಯಾಯಿತು. ಸಧ್ಯ ಈತನ ಸ್ಥಿತಿ ಗಂಭೀರವಾಗಿದ್ದು, ಕಲಬುರಗಿಯ ಇಎಸ್ಐ ಐಸೋಲೇಟೆಡ್ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪಟ್ಟಣದ ವಾರ್ಡ 7ರಲ್ಲಿ ವಾಸಿಸುತ್ತಿದ್ದ ಈತ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಸಧ್ಯಕ್ಕೆ 7, 8 ಮತ್ತು 9ನೇ ವಾರ್ಡಗಳನ್ನು ಸೀಲ್ಡೌನ್ ಹಾಗೂ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಅಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಈತನಿಗೆ ಕಾಮಾಲೆ ರೋಗ ಇತ್ತೆನ್ನಲಾಗಿದ್ದು, ಮಹಾರಾಷ್ಟ್ರದ ಉಮರ್ಗಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಆರೋಗ್ಯದಲ್ಲಿ ಬದಲಾವಣೆ ಕಾಣದಿದ್ದಾಗ ಕಲಬುರಗಿ ಖಾಸಗಿ ಆಸ್ಪತ್ರೆಗೆ 29ರಂದು ಚಿಕಿತ್ಸೆಗೆ ಸೇರಿಕೊಂಡಿದ್ದ. ಇಲ್ಲಿ ಮೂರು ದಿನ ಚಿಕಿತ್ಸೆ ಪಡೆದ. ಆರೋಗ್ಯದಲ್ಲಿ ಏರುಪೇರಾದಾಗ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೋದಾಗ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಹೇಳಲಾಯಿತು. ಆದರೆ ಆತ ನೇರವಾಗಿ ಆಳಂದಕ್ಕೆ ಬಂದು ಇಲ್ಲಿ ಖಾಸಗಿ ವೈದ್ಯರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ.
ಮಂಗಳವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾದಾಗ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಇಲ್ಲಿ ಆತನ ರಕ್ತ ಮತ್ತು ದ್ರವ ಪರೀಕ್ಷಿಸಿದಾಗ ಕರೊನಾ ಸೋಂಕು ಇರುವುದು ಖಚಿತವಾಗಿದೆ. ಈತನಿಗೆ ಕರೊನಾ ಇರುವುದನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಅಭಯಕುಮಾರ ಖಚಿತ ಪಡಿಸಿದ್ದಾರೆ.
ಸೋಂಕಿತನಿಗೆ ಪತ್ನಿ, ಇಬ್ಬರು ಮಕ್ಕಳು, ತಂದೆ ಮತ್ತು ತಾಯಿ ಇದ್ದು ಎಲ್ಲರೂ ಒಟ್ಟಿಗೆ ಇರುವುದರಿಂದ ಇವರನ್ನು ಮತ್ತು ಈತನ ಜತೆ ಸಂಪರ್ಕಕ್ಕೆ ಬಂದವರನ್ನು ಹೋಂ ಕ್ವಾರಂಟೈನ್ ಮಾಡಲಾಗುವುದೆಂದು ಡಾ. ಅಭಯಕುಮಾರ ಹೇಳಿದ್ದಾರೆ. ಆಳಂದದಲ್ಲಿ ಕರೊನಾ ಸೋಂಕು ಇರುವುದು ಪತ್ತೆಯಾಗುತ್ತಲೇ ಸ್ಥಳಕ್ಕೆ ಆಗಮಿಸಿದ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಇತರೆ ಅಧಿಕಾರಿಗಳ ಬರುವಿಕೆಗಾಗಿ ಸುಮಾರು 45 ನಿಮಿಷ ಕಾಯಬೇಕಾಯಿತು. ನಂತರ ಬಂದ ಪುರಸಭೆ ಮುಖ್ಯಾಧಿಕಾರಿ ಬಾಬುರಾವ ವಿಭುತೆಯವರಿಗೆ ಸೂಚನೆ ನೀಡಿದ ಎಸ್ಪಿ ಸೀಲ್ಡೌನ್ ಕಟ್ಟುನಿಟ್ಟಾಗಿ ಮಾಡುವಂತೆ ಸೂಚಿಸಿದರು. ತಹಸೀಲ್ದಾರ್ ದಯಾನಂದ ಪಾಟೀಲ್, ಡಿವೈಎಸ್ಪಿ ಮಲ್ಲಿಕಾರ್ಜು ನ , ಸಿಪಿಐ ಶಿವಾನಂದ ಗಾಣಿಗೇರ ಇತರೆ ಅಧಿಕಾರಿಗಳು ಇದ್ದರು.