ಜಿಲ್ಲೆ

ಆಲ್ದೂರು ಭಾಗದಲ್ಲಿ ಸಲಗ ಸಂಚಾರ

ಆಲ್ದೂರು: ಹೋಬಳಿಯ ಕೆಲವು ಗ್ರಾಮಗಳಲ್ಲಿ ಒಂಟಿ ಕಾಡಾನೆ ಸಂಚರಿಸುತ್ತಿದ್ದು ಕಾಫಿ ಬೆಳೆಗಾರರಲ್ಲಿ ಆತಂಕ ಮನೆಮಾಡಿದೆ.

ಬುಧವಾರ ಬೆಳಗ್ಗೆ ಒಂಟಿ ಕಾಡಾನೆಯೊಂದು ಕೋಣಬಸರಿ ಎಸ್ಟೇಟ್ ಬಳಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ಹರಿವಿನಗಂಡಿ ಗ್ರಾಮದ ವಸಂತ್‌ಕುಮಾರ್ ಅವರ ಮನೆಯ ಮುಂದೆ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಆನೆ ಸಂಚಾರ ಸೆರೆಯಾಗಿದೆ.

ಕಠಾರದಹಳ್ಳಿ, ಹರಿವಿನಗಂಡಿ, ಇಳೇಖಾನ್, ತೋಳೂರುಗುಡ್ಡ, ಸತ್ತಿಹಳ್ಳಿ, ಗುಲ್ಲನ್‌ಪೇಟೆ, ಹಾಂದಿ, ಗುಡ್ಡದೂರು ಭಾಗದ ಜನರು ಎಚ್ಚರ ವಹಿಸುವಂತೆ ಅರಣ್ಯ ಇಲಾಖೆ ಬುಧವಾರ ಬೆಳಗ್ಗೆ ಕಾಫಿ ಬೆಳೆಗಾರರಿಗೆ ಸೂಚನೆ ನೀಡಿತ್ತು. ಮಳೆ ಪ್ರಮಾಣ ಕಡಿಮೆಯಾಗಿದ್ದು ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಆದರೆ ಈ ಭಾಗದಲ್ಲಿ ಒಂಟಿ ಕಾಡಾನೆ ಸಂಚಾರದಿಂದ ಕಾಫಿ ತೋಟದಲ್ಲಿ ಕೆಲಸ ಮಾಡಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದು, ಕಾಫಿ ಬೆಳೆಗಾರರಿಗೆ ತಲೆನೋವಾಗಿದೆ. ಮೇ ತಿಂಗಳಲ್ಲಿ ಹಾಂದಿ ಭಾಗದಲ್ಲಿ ಪುಂಡಾಟ ನಡೆಸುತ್ತಿದ್ದ ಒಂಟಿ ಆನೆ ಮರಿಯನ್ನು ಅರಣ್ಯ ಇಲಾಖೆ 6 ಸಾಕು ಆನೆಗಳನ್ನು ತರಿಸಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದು ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರಕ್ಕೆ ಕಳಿಸಿತ್ತು. ನಂತರ ಕಾಡಾನೆಗಳ ಸಂಚಾರ ಕಂಡುಬಂದಿರಲಿಲ್ಲ. ಆದರೆ ಈಗ ಮತ್ತೆ ಕಾಡಾನೆ ಪ್ರತ್ಯಕ್ಷವಾಗಿದ್ದು ಬೆಳೆಗಾರರ ನಿದ್ದೆಗೆಡಿಸಿದೆ.