ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಗ್ರಾಮೀಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ 2023-24ನೇ ಸಾಲಿನ ರೋಟರಿ ಕ್ಲಬ್-6 ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.
ಕ್ರಿಕೆಟ್ ಪಂದ್ಯಾವಳಿಯನ್ನು ರೋಟರಿ ಕ್ಲಬ್ ಜಿಲ್ಲಾ ಸಹಾಯಕ ರಾಜ್ಯಪಾಲ ರೋಟರಿಯನ್ ಡಾ.ಹರಿ.ಎ.ಶೆಟ್ಟಿ ಉದ್ಘಾಟಿಸಿ ಮಾತನಾಡಿ, ರೋಟರಿ ಸದಸ್ಯರು ಸದಾ ಸಮಾಜ ಸೇವೆ, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ರೋಟರಿ ಸಂಸ್ಥೆಯ ಸದಸ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ಸದೃಢತೆಗೆ ಕ್ರೀಡಾ ಚಟುವಟಿಕೆ ಸಹಕಾರಿ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವು ರೋಟರಿ ಸಂಸ್ಥೆಗಳ ವಲಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತಿದೆ ಎಂದರು.
ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆಯು ಈ ಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಇದೀಗ ಸಂಸ್ಥೆ ವತಿಯಿಂದ ರೋಟರಿ ವಲಯ ಮಟ್ಟದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಲೂರು ಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಟಿ.ವಿ.ದಯಾನಂದ್, ಕಾರ್ಯದರ್ಶಿ ಕಿರಣ್, ರೋಟರಿ ಕ್ಲಬ್ ವಲಯ ಸೇನಾನಿ ಉದಯ್ ಕುಮಾರ್, ರೋಟರಿ ಪದಾಧಿಕಾರಿಗಳಾದ ಎ.ಎಸ್.ರಾಮಣ್ಣ, ನಾರಾಯಣಸ್ವಾಮಿ ರೋಟರಿ ಕ್ಲಬ್ ಸರ್ವ ಸದಸ್ಯರು, ಆಲೂರು ಸಿದ್ದಾಪುರ ಸರ್ಕಾರಿ ಶಾಲೆ, ಪದವಿ ಪೂರ್ವ ಕಾಲೇಜು ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿವಿಧ ರೋಟರಿ ಕ್ಲಬ್‌ನಿಂದ 8 ತಂಡಗಳು ಪಾಲ್ಗೊಂಡಿದ್ದವು. ಪಂದ್ಯಾವಳಿಯಲ್ಲಿ ಕೊಡ್ಲಿಪೇಟೆ ಹೇಮಾವತಿ ರೋಟರಿ ಕ್ಲಬ್ ತಂಡ ಪ್ರಥಮ ಸ್ಥಾನ ಪಡೆದುಕೊಂಡರೆ ಅತಿಥೇಯ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ತಂಡ ದ್ವೀತಿಯ ಸ್ಥಾನ ಪಡೆದುಕೊಂಡಿತು.