ಚಾಮರಾಜನಗರ: ತಾಲೂಕಿನ ಆಲೂರು ಗ್ರಾಮದಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀಮಲೆಮಹದೇಶ್ವರಸ್ವಾಮಿ ಹಾಲರವಿ ಉತ್ಸವ ಅದ್ಧೂರಿಯಾಗಿ ನೆರವೇರಿತು.
ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಅಭಿಷೇಕ ಮತ್ತು ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು. ಬಳಿಕ ಗ್ರಾಮದ ಹೊಮ್ಮದ ಕೆರೆಗೆ ತೆರಳಿ ಪೂಜೆ ನೆರವೇರಿಸಲಾಯಿತು. ಬಳಿಕ ಹಾಲರವಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಸತ್ತಿಗೆ ಸೂರಿಪಾನಿ, ಮಂಗಳವಾದ್ಯ, ಕಂಡಾಯ, ಬಸವನೊಟ್ಟಿಗೆ ಸುಮಾರು 100 ಕ್ಕಿಂತಲೂ ಹೆಚ್ಚು ಹೆಣ್ಣು ಮತ್ತು ಗಂಡು ಮಕ್ಕಳು ಹಾಲರವಿ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.
ಹೊಮ್ಮದ ಕೆರೆಯಿಂದ ಸಾಗಿದ ಮೆರವಣಿಗೆ, ಗ್ರಾಮ ಪಂಚಾಯಿತಿ ರಸ್ತೆ, ಬರೋಡ್ ಬ್ಯಾಂಕ್ ರಸ್ತೆ ಹಾಗೂ ಇನ್ನಿತರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀಮಲೆ ಮಹದೇಶ್ವರಸ್ವಾಮಿ ದೇವಸ್ಥಾನದ ಬಳಿ ಮುಕ್ತಾಯವಾಯಿತು. ತಮಟೆ, ವೀರಗಾಸೆ, ಕಂಸಾಳೆ, ಮಂಗಳವಾದ್ಯ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ತುಂಬಿತು. ಮೆರವಣಿಗೆ ಸಾಗುವ ಹಾದಿಯಲ್ಲಿ ಯುವಕರು ಕುಣಿದು ಕುಪ್ಪಳಿಸಿ, ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಉತ್ಸವದಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಗ್ರಾಮದಲ್ಲಿ ಹಾಲರವಿ ಉತ್ಸವದ ಅಂಗವಾಗಿ ಪ್ರಮುಖ ಬೀದಿಗಳನ್ನು ತಳೀರು-ತೋರಣ ಮತ್ತು ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.
ಈ ಸಂದರ್ಭದಲ್ಲಿ ಉಪ್ಪಾರ ಸಮುದಾಯದ ಯಜಮಾನರಾದ ನಾಗೇಶ್, ಗಣೇಶ್, ಕುಮಾರ್, ಸೋಮಣ್ಣ, ಮಂಜು, ಚಿಕ್ಕಣ್ಣ, ಮಹೇಶ್, ಮರಿಸ್ವಾಮಿ, ರಾಮಶೆಟ್ಟಿ, ದೇವರಗುಡ್ಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.