ಜಿಲ್ಲೆ

ಆಲೂರು ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯ

ಕಾನಹೊಸಹಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಮತ್ತು ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಕ್ಷೇತ್ರದ ಗಡಿಭಾಗದ ಹಳ್ಳಿ ಜನರ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು ಕೋಟಿ ರೂ. ವೆಚ್ಚದ ಉನ್ನತೀಕರಣ ಕಾಮಗಾರಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ 50ಕ್ಕೆ ಹೊಂದಿಕೊಂಡಿರುವ ಆಲೂರು ಆಸ್ಪತ್ರೆಗೆ ಅಗತ್ಯ ಸೌಕರ್ಯ ಕಲ್ಪಿಸುವುದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಖನಿಜ ನಿಧಿಯ ಎರಡು ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುವುದರಿಂದ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕಿದೆ. ಮುಂಬರುವ ದಿನಗಳಲ್ಲಿ ಎಕ್ಸರೇ ಯಂತ್ರ ನೀಡಲಾಗುವುದು. ವೈದ್ಯರು ಮತ್ತು ಸಿಬ್ಬಂದಿ ವಸತಿ ನಿಲಯ ನಿರ್ಮಾಣಕ್ಕೆ ಕ್ರಮಕೈಗೊಳಲಾಗಿದೆ ಎಂದು ತಿಳಿಸಿದರು.

ಆಲೂರು, ಹಿರೇಕುಂಬಳಗುಂಟೆ ಹಾಗು ಪೂಜಾರಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳ ಜನರಿಗೆ ತಾಲೂಕು ಕೇಂದ್ರ 50 ದಿಂದ 60 ಕಿ.ಮೀ ದೂರವಿದೆ. ಸ್ಥಳೀಯವಾಗಿ ಆರೋಗ್ಯ ಸೌಲಭ್ಯ ಸಿಗದಿದ್ದರೆ ಪಕ್ಕದ ಜಿಲ್ಲೆಗಳಾದ ದಾವಣಗೆರೆ, ಬಳ್ಳಾರಿ, ಚಿತ್ರದುರ್ಗಕ್ಕೆ ಹೋಗಬೇಕಾಗುತ್ತದೆ ಎಂದು ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಕಾನಾಮಡುಗು ಶರಣಬಸವೇಶ್ವರ ದಾಸೋಹಮಠದ ದಾ.ಮ.ಐಮುಡಿ ಶರಣಾರ್ಯರು, ಗ್ರಾಪಂ ಅಧ್ಯಕ್ಷೆ ಉಮಾದೇವಿ, ಉಪಾಧ್ಯಕ್ಷೆ ಚೌಡಮ್ಮ, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ್, ತಾಪಂ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ನಿಂಗಪ್ಪ, ತಾಪಂ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಮೆಡಿಕಲ್ ಮಂಜುನಾಥ, ಜಿಲ್ಲಾ ವೈದ್ಯಾಧಿಕಾರಿ ಶಂಕರನಾಯ್ಕ, ಡಿಎಚ್‌ಒ ಡಾ.ಪ್ರದೀಪ್, ಜಿಪಂ ಎಇಇ ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಮಲಿಯಪ್ಪ, ಪೆನ್ನಪ್ಪ, ಗ್ರಾಪಂ ಸದಸ್ಯರು ಇದ್ದರು.