Oplus_16777216 
ಜಿಲ್ಲೆ

ಆಲೂರಿನಲ್ಲಿ ಅದ್ದೂರಿ ತಿರಂಗಾ ಯಾತ್ರೆ

ಆಲೂರು: ಆಪರೇಷನ್ ಸಿಂಧೂರ ಯಶಸ್ವಿ ಮತ್ತು ದೇಶದ ಸೈನಿಕರಿಗೆ ಗೌರವಿಸಲು ತಾಲೂಕು ದೇಶಭಕ್ತಿ ನಾಗರಿಕ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆ ಅದ್ದೂರಿಯಾಗಿ ಜರುಗಿತು.

ಆಲೂರು ಪಟ್ಟಣದ ಕೆಇಬಿ ವೃತ್ತ ಬಳಿ ತಾಲೂಕಿನ ನಾಗರಿಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದೇಶಭಕ್ತಿ ನಾಗರಿಕ ಸಮಿತಿ ಮುಖಂಡರು ಜಮಾವಣೆಗೊಂಡರು. ಕಾರ್ಜುವಳ್ಳಿ ಹಿರೇಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡಿದರು. ನಂತರ ಅದ್ದೂರಿ ಮೆರವಣಿಗೆಯ ಮೂಲಕ ವೀರಶೈವ ಕಲ್ಯಾಣ ಮಂಟಪದಲ್ಲಿ ಸಮಾವೇಶಗೊಂಡರು.

ಶಾಲಾ, ಕಾಲೇಜು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಸಂಭ್ರಮದಿಂದ ತ್ರಿವಣ ಧ್ವಜವನ್ನು ಹಿಡಿದು ಸಾಗುತ್ತಾ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ವೀರಯೋಧರಿಗೆ ಕೃತಜ್ಞತೆ ಸಲ್ಲಿಸಿ ಒಕ್ಕೊರಲಿನಿಂದ ಬೆಂಬಲ ಸೂಚಿಸಿದರು. ಭಾರತ್ ಮಾತಾಕಿ ಜೈ, ಜೈ ಜವಾನ್, ಜೈ ಕಿಸಾನ್, ಭಾರತ ಮಾತಾಕಿ ಜೈ, ಸಿಂಧೂರ ಘೋಷಣೆಗಳು ದೇಶಭಕ್ತರಿಂದ ಮುಗಿಲು ಮುಟ್ಟಿದವು.

ಬಳಿಕ ಮಾತನಾಡಿದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ದೇಶದ ರಕ್ಷಣೆಗೆ ನಮ್ಮ ಯೋಧರು ಮಾಡುತ್ತಿರುವ ಹೋರಾಟಕ್ಕೆ ನಾವೆಲ್ಲರೂ ಬೆಂಬಲ ನೀಡಬೇಕು. ನಮ್ಮ ಸೈನಿಕರು ನಮ್ಮ ಹೆಮ್ಮೆ ಎಂದ ಅವರು, ಭಾರತೀಯ ಸೈನಿಕರ ಶೌರ್ಯ, ಪರಾಕ್ರಮ ಹಾಗೂ ತಾತ್ವಿಕ ನಿಷ್ಠೆಯನ್ನು ಮೆಚ್ಚಿಕೊಂಡಿದ್ದೇವೆ. ಭಾರತೀಯ ಸೇನೆಯ ಸಾಧನೆ ಅಭಿನಂದನಾರ್ಹ. ದೇಶ ಸುರಕ್ಷಿತವಾಗಿರಲಿ, ಯೋಧರಿಗೆ ಒಳಿತಾಗಲಿ ಎಂದರು.

ಶಾಸಕ ಸಿಮೆಂಟ್ ಮಂಜ ಮಾತನಾಡಿ, ದೇಶದ ಪ್ರತಿಯೊಬ್ಬ ವ್ಯಕ್ತಿ ರಾಷ್ಟ್ರದ ಮಣ್ಣು ಹಾಗೂ ಸೈನಿಕರನ್ನು ಪ್ರೀತಿಸುವುದರ ಜತೆಗೆ ಗೌರವಿಸಬೇಕು. ಪ್ರತಿಯೊಬ್ಬರೂ ದೇಶಾಭಿಮಾನವನ್ನು ಸದಾ ಎದೆಯಲ್ಲಿ ಇಟ್ಟುಕೊಂಡು ಜೀವಿಸಬೇಕು. ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ ಮತ್ತು ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ದೇಶದ ಯಾವುದೇ ವಿಭಾಗದ ಸೈನಿಕರ ಬೆನ್ನೆಲುಬಾಗಿ ನಿಂತು ನೈತಿಕ ಶಕ್ತಿ ಹಾಗೂ ಆತ್ಮಬಲವನ್ನು ತುಂಬಬೇಕು ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಹಿಂದು ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ನಮ್ಮ ಸೇನೆ ಅಭೂತಪೂರ್ವ ಸಾಧನೆ ಮಾಡಿದೆ. ಪಾಕ್ ದಾಳಿಯನ್ನು ನಮ್ಮ ವೀರ ಯೋಧರು, ಕ್ಷಿಪಣಿಗಳು ಯಶಸ್ವಿಯಾಗಿ ತಡೆದಿವೆ. ವೀರ ಯೋಧರ ಸಾಹಸಕ್ಕೆ ಬೆಂಬಲ ವ್ಯಕ್ತಪಡಿಸಿ, ಮಾನಸಿಕ ಸ್ಥರ್ಯ ತುಂಬಲು ಹಾಗೂ ರಾಷ್ಟ್ರದ ಐಕ್ಯತೆಗಾಗಿ ನಾವೆಲ್ಲರೂ ತಿರಂಗಾ ಯಾತ್ರೆಯಲ್ಲಿ ಭಾಗಿಯಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಆಲೂರು ತಾಲೂಕಿನ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಕಲೇಶಪುರ ಆಲೂರು ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ವಿವಿಧ ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.