ಆಲೂರು: ಪಟ್ಟಣದ ಎನ್.ಎಚ್.ಪಿ.ಎಸ್. ಶಾಲಾ ಆವರಣದಲ್ಲಿ ಆಲೂರು ಬಾಯ್ಸ್ ವತಿಯಿಂದ ಗುರುವಾರ ಆಯೋಜಿಸಿದ್ದ ಹಗಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಆಲೂರಿನ ಎಂ.ವೈ.ಸಿ.ಬಾಯ್ಸ ತಂಡ ಪ್ರಥಮ ಬಹುಮಾನ ಪಡೆಯಿತು.
ಆಲೂರಿನ ಹಾಸ್ಟೆಲ್ ಬಾಯ್ಸ ದ್ವಿತೀಯ, ಮಗ್ಗೆ ಬಾಯ್ಸ ತೃತೀಯ ಹಾಗೂ ಕೊಂಗಳ್ಳಿ ಬಾಯ್ಸ ತಂಡ 4ನೇ ಬಹುಮಾನ ಪಡೆಯಿತು.
ಬಿಜೆಪಿ ಮುಖಂಡ ವೆಂಕಟೇಶ್ ಮಾತನಾಡಿ, ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಕ್ರೀಡಾಕೂಟಗಳು ಸಹಕಾರಿಯಾಗಿವೆ. ಕ್ರೀಡಾ ಕ್ಷೇತ್ರದಲ್ಲಿರುವ ಬಹುತೇಕ ಯುವಕ, ಯುವತಿಯರು ಉನ್ನತ ಹುದ್ದೆಗಳನ್ನು ಅಲಂಕರಿಸಿ, ಉತ್ತಮ ಬದುಕು ಕಂಡುಕೊಂಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಪಂದ್ಯಾವಳಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನವಾಗಿ 20,000 ರೂ., ಟ್ರೋಫಿ, ದ್ವಿತೀಯ ಬಹುಮಾನ 10,000 ರೂ.,ಆಕರ್ಷಕ ಟ್ರೋಫಿ, ತೃತೀಯ ಬಹುಮಾನ 5,000 ರೂ.ಹಾಗೂ ಆಕರ್ಷಕ ಟ್ರೋಫಿ ಮತ್ತು ಚತುರ್ಥಿ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್, ಆಲೂರು ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅನೂಪ್ ಮೆಣಸಮಕಿ, ಮುಖಂಡ ಧರ್ಮರಾಜ್, ಕರವೇ ಉಪಾಧ್ಯಕ್ಷ ನವೀನ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಎಚ್.ವಿ ರಾಘವೇಂದ್ರ ಇತರರು ಇದ್ದರು.