ದಾಂಡೇಲಿ: ತಾಲೂಕಿನ ಆಲೂರು ಗ್ರಾಮದಲ್ಲಿ ಫೆ.28ರಂದು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ.
ಆಲೂರು ಗ್ರಾಪಂ ಸಭಾಭವನದಲ್ಲಿ ತಹಸೀಲ್ದಾರ್ ಶೈಲೇಶ್ ಪರಮಾನಂದ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಪೂರ್ವ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ತಹಸೀಲ್ದಾರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಸಾಹಿತ್ಯದ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಆಲೂರ ಗ್ರಾಮದಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಗ್ರಾಮಸ್ಥರು ಹಾಗೂ ಕಸಾಪ ಸಹಕಾರದಿಂದ ಯಶಸ್ವಿಗೊಳಿಸೋಣ ಎಂದರು.
ತಾಪಂ ಇಒ ಟಿ.ಸಿ. ಹಾದಿಮನಿ ಮಾತನಾಡಿ, ತಾಲೂಕಿನ ಪ್ರತಿಯೊಬ್ಬರೂ ಕನ್ನಡ ಹಬ್ಬಕ್ಕಾಗಿ ಶ್ರಮಿಸಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ದಾಂಡೇಲಿ ತಾಲೂಕು ಆದ ನಂತರ ಎರಡು ಸಮ್ಮೇಳನಗಳು ನಗರ ಪ್ರದೇಶದಲ್ಲಿ ನಡೆದಿತ್ತು. ಈ ಬಾರಿ ಗ್ರಾಮೀಣ ಭಾಗದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಆಲೂರಿನ ಗ್ರಾಮಸ್ಥರು ಆತಿಥ್ಯ ವಹಿಸಿಕೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಜಿಪಂ ಮಾಜಿ ಸದಸ್ಯ ವಾಮನ ಮಿರಾಶಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ್, ಆಲೂರು ಪಿಡಿಒ ಸಂತೋಷ ಹೆಳವರ್ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಗ್ರಾಪಂ ಸದಸ್ಯರಾದ ಲಕ್ಷ್ಮಣ್ ಜಾಧವ, ಲಕ್ಷ್ಮಿಬಾಯಿ ಹರಿಜನ್, ಗ್ರಾಮಸ್ಥರಾದ ಪರಶುರಾಮ್ ಎಚ್.ಬಿ., ಗಿರೀಶ್ ಠೋಸೂರ, ಮಾರುತಿ ಕಾಂಬೇಕರ್, ಗಣಪತಿ ಬೇಕನಿ, ಮಹಾವೀರ್ ನೊರ್ಲೇಕರ, ಈಶ್ವರ್ ವಟ್ಲೇಕರ, ಮುಕುಂದ ದಳವಿ, ಲಲಿತಾ ಪುಟ್ಟೇಗೌಡ, ಶ್ರೀದೇವಿ ಪುಲೆ, ರಾಮಪ್ಪ ಸಿದ್ದರ್, ಮೋಹನ್ ಹಲವಾಯಿ, ಆರ್.ಪಿ .ನಾಯ್ಕ, ಗುರುಶಾಂತ ಜಡೇಹಿರೇಮಠ, ಪ್ರವೀಣ್ ನಾಯ್ಕ, ಹನ್ಮಂತ್ ಕುಂಬಾರ್, ಭೀಮಾಶಂಕರ ಅಜನಾಳ, ಎಂ. ಆರ್. ನಾಯಕ್, ಅನಿಲ್ ನಾಯ್ಕರ, ಅನಿಲ ದಂಡಗಲ ಸುರೇಶ ಪಾಲನಕರ, ಕಲ್ಪನಾ ಪಾಟೀಲ ಮುಂತಾದವರಿದ್ದರು.
ಗ್ರಾಮ ಲೆಕ್ಕಾಧಿಕಾರಿ ರವಿ ಕಮ್ಮಾರ ಸ್ವಾಗತಿಸಿದರು. ದಾಂಡೇಲಿ ಕಸಾಪ ಅಧ್ಯಕ್ಷ ನಾರಾಯಣ ನಾಯ್ಕ ವಂದಿಸಿದರು. ಕಾರ್ಯದರ್ಶಿ ಪ್ರವೀಣ ನಾಯ್ಕ ನಿರೂಪಿಸಿದರು.