ಜಿಲ್ಲೆ

ಆಲೂಗಡ್ಡೆ ಅಂಗಾಂಶ ಕುಡಿಕಾಂಡ ಸಸಿಗೆ 30,000 ರೂ. ಸಹಾಯಧನ

ಹಾಸನ: ಅಂಗಾಂಶ ಕುಡಿ ಕಾಂಡ ಸಸಿಗಳ ಮುಖಾಂತರ ಆಲೂಗಡ್ಡೆ ಬೀಜದ ಗೆಡ್ಡೆ ಉತ್ಪಾದಿಸಲು ಸಿಎಸ್‌ಎಸ್-ಎಂಐಡಿಎಚ್ ಯೋಜನೆಯಡಿ 26 ಎಕರೆ ಪ್ರದೇಶದಲ್ಲಿ ಎಆರ್‌ಸಿ ತಂತ್ರಜ್ಞಾನದ ಮುಖಾಂತರ ಬೀಜದ ಗೆಡ್ಡೆ ಉತ್ಪಾದಿಸಲು ಪ್ರತಿ ಎಕರೆಗೆ 30,000 ರೂ. ಸಹಾಯ ಧನವನ್ನು ಪಡೆಯಬಹುದಾಗಿದೆ ತೋಟಗಾರಿಕೆ ಉಪ ನಿರ್ದೇಶಕರಾದ ಕೆ. ಮಂಗಳಾ ಅವರು ತಿಳಿಸಿದರು.
ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ, ಅಖಿಲ ಭಾರತ ಆಲೂಗಡ್ಡೆ ಸಮನ್ವಯ ಯೋಜನೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಆಧುನಿಕ ಆಲೂಗಡ್ಡೆ ಉತ್ಪಾದನಾ ತಾಂತ್ರಿಕತೆ ಮತ್ತು ಅಂಗಾಂಶ ಕುಡಿ ಕಾಂಡ ಸಸಿ ಮುಖಾಂತರ ಬೀಜದ ಗೆಡ್ಡೆಗಳ ಉತ್ಪಾದನೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಆರ್‌ಸಿ ತಂತ್ರಜ್ಞಾನದಿಂದ ಹಾಸನ ಜಿಲ್ಲೆಗೆ ಬೇಕಾಗುವ ಆಲೂಗಡ್ಡೆ ಬೀಜವನ್ನು ರೈತರೆ ಉತ್ಪಾದಿಸಬೇಕು ಮತ್ತು ಆಲೂಗಡ್ಡೆ ಉತ್ಪಾದಿಸುವ ರೈತರು ರೈತ ಉತ್ಪಾದಕ ಸಂಸ್ಥೆ ಸ್ಥಾಪಿಸುವ ಮುಖಾಂತರ ರೈತರ ಸವಾಲುಗಳಿಗೆ ಸ್ಪಂದಿಸುವ ಅಗತ್ಯವಿದೆ ಎಂದು ಹೇಳಿದರು.
ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಎಸ್.ಕೆ. ನಟರಾಜ ಮಾತನಾಡಿ, ಹಾಸನ ಜಿಲ್ಲೆ ಉತ್ತಮ ಆಲೂಗೆಡ್ಡೆ ಉತ್ಪಾದೆನೆಗೆ ಹೆಸರುವಾಸಿಯಾಗಿದೆ. ಪ್ರಸ್ತುತ ಮುಂಗಾರಿನಲ್ಲಿ 6000 ಎಕರೆಯಲ್ಲಿ ಆಲೂಗೆಡ್ಡೆ ಬಿತ್ತನೆಯಾಗಿದ್ದು 2000 ಎಕರೆಯಷ್ಟು ಹಿಂಗಾರಿನಲ್ಲಿ ಬಿತ್ತನೆಯಾಗುವ ಸಂಭವವಿದೆ. ನಮ್ಮ ಕೇಂದ್ರದಿಂದ ಬಿಡುಗಡೆಯಾಗುವ ಕುಫ್ರಿ ಕರಣ, ಕುಫ್ರಿ ಪುಕರಾಜ, ಕುಫ್ರಿ ಲವುಕರ, ನೀಲಿ ತಿರುಳಿನ, ಕೆಂಪು ಚರ್ಮದ ಚಿಪ್ಸ್ ಮತ್ತು ಫಿಂಗರ ಚಿಪ್ಸ್ ಉತ್ಪಾದಿಸಲು ಯೋಗ್ಯ ತಳಿಗಳು ಲಭ್ಯವಿದ್ದು ರೈತರು ಈ ತಳಿಗಳ ಸದುಪಯೋಗ ಪಡೆಯಲು ಕೇಂದ್ರದಲ್ಲಿ ಅಗಾಂಶ ಕುಡಿ ಕಾಂಡ ಸಸಿ ಉತ್ಪಾದನೆಗೆ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ಕೇಂದ್ರದ ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕ ಡಾ.ಎಸ್.ಎಲ್. ಜಗದೀಶ ಮಾತನಾಡಿ, ಆಲೂಗಡ್ಡೆ ಅಂಗಮಾರಿ ರೋಗ ಹಾಗೂ ದುಂಡಾಣು ರೋಗ ಮತ್ತು ಕೀಟಗಳನ್ನು ತಡೆಗಟ್ಟಲು ಕಡ್ಡಾಯವಾಗಿ ಬೀಜೋಪಚಾರ ಮ್ಯಾಂಕೋಜೆಬ್ ಸಿಂಪಡಿಸಬೇಕು. ರೋಗ ಉಲ್ಬಣಗೊಂಡಲ್ಲಿ ಡೈಮೊಥೊಮಾರ್ಚ ಜತೆಗೆ ಮ್ಯಾಂಕೊಜೆಬ್ ಸಿಂಪಡಣೆ. ನಂತರ 15 ದಿನಗಳ ಅಂತರದಲ್ಲಿ ಫೆಮಾಕ್ಸಿಡೀನ್, ಸೈಮಾಕ್ಸಿನಿಲ್ ಸಿಂಪಡಿಸಬೇಕು. ಗೆಡ್ಡೆಗಳ ಕಟಾವಿನ ನಂತರ ಮುಂದಿನ ಹಂಗಾಮಿನಲ್ಲಿ ತರಕಾರಿ ಬೆಳೆಗಳನ್ನು ಹೊರತುಪಡಿಸಿ ಮೆಕ್ಕೆಜೋಳ, ರಾಗಿ, ಸೆಣಬು ಅಥವಾ ಡಯಾಂಚ್ ಬೆಳೆಗಳನ್ನು ಬೆಳೆಯಬಹುದು. ಕೀಟಗಳನ್ನು ಹತೋಟಿ ಮಾಡಲು ಅಂರ್ತವ್ಯಾಪಿ ಕೀಟನಾಶಕಗಳನ್ನು ಸಿಂಪಡಿಸುವುದು ಮತ್ತು ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ಪಡೆದು ಉತ್ತಮ ಆಲೂಗಡ್ಡೆಯನ್ನು ಬೆಳೆಯಬಹುದು ಎಂದು ಮಾಹಿತಿ ನೀಡಿದರು.
ಆಲೂಗಡ್ಡೆ ಪ್ರದರ್ಶನದಲ್ಲಿ 40 ವಿವಿಧ ಆಲೂಗಡ್ಡೆ ತಳಿಗಳ ಪ್ರದರ್ಶನಕ್ಕೆ ಇಡಲಾಗಿತ್ತು ಮತ್ತು ಅಂಗಾಂಶ ಕುಡಿ ಕಾಂಡ ಸಸಿಗಳ ಪ್ರಾತ್ಯಕ್ಷಿತೆಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ 150 ಕ್ಕೂ ಹೆಚ್ಚು ಆಲೂಗಡ್ಡೆ ರೈತರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಅರಕಲಗೂಡು ವಿ. ಮಧುಸೂದನ್, ಪ್ರಗತಿಪರ ರೈತ ಬಿ.ಕೆ. ಮಂಜುನಾಥ, ವಿನೋದಾ ಇತರರು ಪಾಲ್ಗೊಂಡಿದ್ದರು.