ಜಿಲ್ಲೆ

ಆಲಿಕಲ್ಲು ಸಹಿತ ಮಳೆಗೆ ಭತ್ತ, ಬಾಳೆ ಬೆಳೆಗೆ ಹಾನಿ

ಪಾಂಡವಪುರ: ತಾಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಮನೆಗಳ ಛಾವಣಿ ಶಿಥಿಲಗೊಂಡಿದ್ದು, ಬಾಳೆ, ಭತ್ತದ ಬೆಳೆ ಹಾನಿಯಾಗಿವೆ.


ತಾಲೂಕಿನ ಚಿಕ್ಕಯಾರಹಳ್ಳಿ, ಕಟ್ಟೇರಿ ಭಾಗದಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿ ರೈತರಿಗೆ ನಷ್ಟವಾಗಿದೆ. ಗ್ರಾಮದ ಶಂಭುಲಿಂಗಯ್ಯ, ಪುಟ್ಟಸಿದ್ದಮ್ಮ, ವಿರೂಪಾಕ್ಷ, ಶಿವು, ಜವರಾಯಿ, ಶ್ರೀಮಂತಿ, ಚಂದ್ರಶೇಖರ್, ನಾಗಮ್ಮ, ಚಂದ್ರಶೇಖರ್, ನಿಂಗಪ್ಪ, ಪ್ರಭುದೇವಯ್ಯ, ಲಿಂಗರಾಜಮ್ಮ, ಸಣ್ಣತಾಯಮ್ಮ ಸೇರಿದಂತೆ ಹಲವರ ಮನೆಗಳ ಛಾವಣಿ ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ರೈತ ಸೋಮಶೇಖರ್ ಎಂಬುವರು ಜಮೀನಿನಲ್ಲಿ ಬೆಳೆದಿದ್ದ 35 ತೆಂಗಿನ ಮರಗಳು ನೆಲ ಕಚ್ಚಿವೆ.


ಸಿ.ಎಸ್.ಲಿಂಗಪ್ಪ, ದಯಾನಂದ, ಷಡಕ್ಷರಿ, ಶಂಭುಲಿಂಗಯ್ಯ, ನಾಗರಾಜು, ರಮೇಶ್, ವಿಷಕಂಠೇಗೌಡ ಎಂಬುವರಿಗೆ ಸೇರಿದ ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ. ರಾಜಯ್ಯ, ಬಸಪ್ಪ ಎಂಬುವರ ಬಾಳೆ ಸಂಪೂರ್ಣ ನಾಶವಾಗಿದೆ.
ಮಾಹಿತಿ ತಿಳಿದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಕೆ.ಸಿ.ಸೌಮ್ಯಾ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.