ಜಿಲ್ಲೆ

ಆಲಿಕಲ್ಲು ಮಳೆಗೆ ಭತ್ತ, ಮಾವು ಬೆಳೆ ಹಾನಿ

ಮುಂಡರಗಿ: ತಾಲೂಕಿನ ಬಿದರಹಳ್ಳಿ, ವಿಠಲಾಪೂರ, ಮುಂಡವಾಡ, ಹಮ್ಮಿಗಿ, ಗುಮ್ಮಗೋಳ ಮೊದಲಾದ ಗ್ರಾಮಗಳಲ್ಲಿ ಬುಧವಾರ ಸಂಜೆ ಭಾರಿ ಬಿರುಗಾಳಿ, ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ.

ಮಳೆ ಹಾಗೂ ಬಿರುಗಾಳಿಯ ರಭಸಕ್ಕೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ತಾಲೂಕಿನ ಬಿದರಹಳ್ಳಿ, ವಿಠಲಾಪೂರ, ಗುಮ್ಮಗೋಳ, ಹಮ್ಮಿಗಿ ಮೊದಲಾದ ಗ್ರಾಮಗಳಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಗೊಳಗಾಗಿದೆ. ತಾಲೂಕಿನ ಮುಂಡವಾಡ ಗ್ರಾಮದ ರಮೇಶ ಕಳಕರಡ್ಡಿ ಎಂಬ ರೈತನ ಜಮೀನಿನಲ್ಲಿ ಬೆಳೆಯಲಾಗಿದ್ದ 800 ಮಾವಿನ ಗಿಡಗಳ ಫಸಲು ಹಾನಿಗೊಳಗಾಗಿ ಅಂದಾಜು 2 ಟನ್ ಮಾವಿನ ಕಾಯಿಗಳು ಗಾಳಿಯ ರಭಸಕ್ಕೆ ಧರೆಗುರುಳಿವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಹಾಗೂ ಮತ್ತಿತರ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಬಿದರಹಳ್ಳಿ, ವಿಠಲಾಪೂರ ಸೇರಿ ಮೊದಲಾದ ಗ್ರಾಮಗಳಲ್ಲಿನ ಮನೆಗಳ ಮೇಲ್ಛಾವಣಿ ತಗಡುಗಳು ಹಾರಿಹೋಗಿವೆ. ಬಿದರಹಳ್ಳಿ ಗ್ರಾಮದಲ್ಲಿ ಹಲವು ಮನೆಗಳು ಕುಸಿದಿವೆ. ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಬಿದರಹಳ್ಳಿ-ಮುಂಡವಾಡ ರಸ್ತೆಯಲ್ಲಿ ಅನೇಕ ಮರಗಳು ನೆಲಕ್ಕಚ್ಚಿವೆ. ಕೃಷಿ ಇಲಾಖೆ ಅಧಿಕಾರಿಗಳು ಗುರುವಾರ ಹಮ್ಮಿಗಿ, ಬಿದರಹಳ್ಳಿ, ವಿಠಲಾಪೂರ ಮೊದಲಾದ ಕಡೆಗಳಿಗೆ ಭೇಟಿ ನೀಡಿ ಹಾನಿಯಾದ ಬೆಳೆಗಳನ್ನು ಪರಿಶೀಲಿಸಿದ್ದಾರೆ.