ಕೋಲಾರ: ತಾಲೂಕಿನ ಹೋಳೂರು ಹೋಬಳಿ ವ್ಯಾಪ್ತಿಯ ದಾದಿರೆಡ್ಡಿಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಸುರಿದ ಆಲಿಕಲ್ಲು ಸಹಿತ ಮಳೆಗೆ ಸುಮಾರು 10 ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಟೊಮ್ಯಾಟೋ, ಕ್ಯಾಪ್ಸಿಕಂ ಹಾಗೂ ಹೂಕೋಸು ಬೆಳೆ ಹಾನಿಗೀಡಾಗಿದೆ.
ಗ್ರಾಮದ ರೈತರಾದ ವೆಂಕಟೇಶಗೌಡ, ಶ್ರೀರಾಮಪ್ಪ, ನಂಜುಂಡಗೌಡ ಅವರಿಗೆ ಸೇರಿ ಒಟ್ಟು ಆರು ಎಕರೆ ಟೊಮ್ಯಾಟೊ, ಎರಡು ಎಕರೆ ಹೂಕೋಸು ಹಾಗೂ ಎರಡು ಎಕರೆ ಕ್ಯಾಪ್ಸಿಕಂ ಬೆಳೆ ಆಲಿಕಲ್ಲು ಬಳೆಗೆ ಹಾನಿಗೀಡಾಗಿದೆ.
ಕರೊನಾ ಲಾಕ್‌ಡೌನ್ ಸಮಯದಲ್ಲಿ ಬೆಳೆಗೆ ಬೆಲೆ ಇಲ್ಲದೆ ಕೈ ಸುಟ್ಟುಕೊಂಡಿದ್ದ ರೈತರು ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಉತ್ತಮ ಬೆಲೆ ಬಂದು ಚೇತರಿಸಿಕೊಳ್ಳುತ್ತಿರುವಾಗಲೇ ಆಲಿಕಲ್ಲು ಮಳೆಗೆ ಬೆಳೆ ಹಾನಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆಲಿಕಲ್ಲು ಏಟಿಗೆ ಟೊಮ್ಯಾಟೊ ಕಾಯಿಗಳು ತೋಟದ ತುಂಬಾ ಉದುರಿ ಬಿದ್ದಿದ್ದರೆ, ಉಳಿದಿರುವ ಕಾಯಿಗಳ ಮೇಲೂ ಮಚ್ಚೆ ಬಿದ್ದು ಹಾಳಾಗುತ್ತಿದೆ. ಕ್ಯಾಪ್ಸಿಕಂ ಬೆಳೆಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೂಕೋಸು ಕೂಡ ನೆಲಕಚ್ಚಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಬೆಳೆ ಸಮೀಕ್ಷೆಯಲ್ಲಿ ದಾಖಲಿಸಿಕೊಂಡರೆ ಬೆಳೆ ಹಾನಿಗೆ ಹೆಕ್ಟೇರ್‌ಗೆ 18, 000 ರೂ. ಪರಿಹಾರ ನೀಡಲು ಇರುವ ಅವಕಾಶಗಳ ಕುರಿತು ರೈತರಿಗೆ ಸಮಾಧಾನ ಹೇಳಿದ್ದಾರೆ.
ಬೆಳೆ ಸಮೀಕ್ಷೆ ಆಗಿಲ್ಲ: ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ರೈತರೇ ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಅವಕಾಶವಿದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸಮೀಕ್ಷೆ ನಡೆಸಲು ಬಾರದ ರೈತರು ಇದೀಗ ಅಧಿಕಾರಿಗಳತ್ತ ಮುಖ ಮಾಡಿದ್ದಾರೆ. ಅಧಿಕಾರಿಗಳ್ಯಾರೂ ರೈತರ ನೆರವಿಗೆ ಧಾವಿಸಿಲ್ಲ.
ರೈತ ಸಂಘ ಭೇಟಿ: ಮಾಹಿತಿ ತಿಳಿದ ರೈತ ಸಂಘದ ಮುಖಂಡರು ಗುರುವಾರ ಜಮೀನುಗಳಿಗೆ ತೆರಳಿ ಬೆಳೆ ಹಾನಿ ಪರಿಶೀಲಿಸಿದರಲ್ಲದೆ ಬೆಳೆನಷ್ಟವಾಗಿರುವ ನೊಂದ ರೈತರಿಗೆ ಪ್ರತಿ ಎಕರೆಗೆ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉಪಾಧ್ಯಕ್ಷ ಕೆ.ನಾರಾಯಣಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಹಸಿರುಸೇನೆ ತಾಲೂಕು ಅಧ್ಯಕ್ಷ ಆಚಂಪಲ್ಲಿ ಗಂಗಾಧರ್, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ರಾಜು, ಸುಪ್ರೀಂಚಲ ಇತರರಿದ್ದರು.
ಕೈಗೆಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ ಆಲಿಕಲ್ಲು ಮಳೆಯಿಂದ ಅಪಾರ ಬೆಳೆ ನಷ್ಟವಾಗಿದೆ. ಕೂಡಲೆ ಸರ್ಕಾರ ರೈತರ ಕಷ್ಟನಷ್ಟ ಮನಗಂಡು ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಂಡರೆ ರೈತರಲ್ಲಿ ಆತ್ಮಸ್ಥೈರ್ಯ ಹೆಚ್ಚುತ್ತದೆ. ಇಲ್ಲವಾದಲ್ಲಿ ಕೃಷಿಯಿಂದ ವಿಮುಖನಾಗುವ ಸಾಧ್ಯತೆ ಹೆಚ್ಚಿದೆ. ಕೆ. ನಾರಾಯಣಗೌಡ, ರೈತ ಸಂಘ ಉಪಾಧ್ಯಕ್ಷ