ಜಿಲ್ಲೆ

ಆಲಿಕಲ್ಲು ಮಳೆಗೆ ಅಪಾರ ನಷ್ಟ

ಮಳವಳ್ಳಿ: ಪಟ್ಟಣದ ಸೇರಿದಂತೆ ತಾಲೂಕಿನ ಕೆಲವೆಡೆಗಳಲ್ಲಿ ಮಂಗಳವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಮನೆ ಮತ್ತು ಹತ್ತಾರು ಮರಗಳು ಧರೆಗುರುಳಿದರೆ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಜತೆಗೆ ಅಪಾರ ಬೆಳೆ ಹಾನಿಯಾಗಿದೆ.

ಪಟ್ಟಣದ ಸೋಡಮುದ್ದಿನಕೇರಿ ಬಡಾವಣೆಯಲ್ಲಿ ಶಿವಣ್ಣ-ಕಾಂತಮ್ಮ ದಂಪತಿ ವಾಸವಿದ್ದ ಮನೆಗೋಡೆ ಮಳೆಗೆ ಕುಸಿದಿದ್ದು, ಮನೆಯೊಳಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಕಾಗೇಪುರ, ಕೋರೆಗಾಲ ಗ್ರಾಮಗಳ ಸುತ್ತಲಿ ಪ್ರದೇಶದಲ್ಲಿ ಹಲವು ತೆಂಗು ಸೇರಿದಂತೆ ಮರಗಳು ಉರುಳಿ ಬಿದ್ದಿದ್ದು, ನೆಲಮಾಕನಹಳ್ಳಿ ಗೇಟ್ ಬಳಿ ಮದ್ದೂರು ಮಳವಳ್ಳಿ ಮುಖ್ಯರಸ್ತೆಗೆ ಹತ್ತಾರು ಮರಗಳು ಮುರಿದು ಬಿದ್ದಿದ್ದರಿಂದ ಕೆಲ ಸಮಯ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು.

ತಳಗವಾದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿದ್ದ ಮರವೊಂದು 11 ಕೆ.ವಿ. ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಪರಿವರ್ತಕವಿದ್ದ ಕಂಬಗಳು ಬಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಇದರಿಂದ ತಳಗವಾದಿ ಸೇರಿದಂತೆ ಈ ಭಾಗದ ಹಲವು ಗ್ರಾಮಗಳಿಗೆ ರಾತ್ರಿಯಿಡಿ ವಿದ್ಯುತ್ ವ್ಯತ್ಯಯವಾಗಿತ್ತು. ಗ್ರಾಮದ ಪ್ರಮುಖ ವೃತ್ತದಲ್ಲಿ ಅಳವಡಿಸಲಾಗಿದ್ದ ಹೈಮಾಸ್ಟ್ ಲೈಟ್‌ಗಳು ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಕಳಚಿ ಬಿದ್ದಿವೆ.

ಇದೇ ಗ್ರಾಮದ ಗೋಪಿ ಎಂಬ ರೈತ ಒಂದು ಎಕರೆಯಲ್ಲಿ ಬಿತ್ತನೆ ಹಾಕಿದ್ದ ಬೀನ್ಸ್ ಸಸಿಗಳು ಹಾಗೂ ಅಜಯ್ ಕುಮಾರ್ ಒಂದೂವರೆ ಎಕರೆ ಮತ್ತು ಚೇತನ್ ಅವರ ಒಂದು ಎಕರೆಯಲ್ಲಿ ಕಟಾವಿಗೆ ಬಂದಿದ್ದ ಬಾಳೆ ಸೇರಿದಂತೆ ಹಲವು ರೈತರ ಜಮೀನುಗಳಲ್ಲಿದ್ದ ವಿವಿಧ ಬೆಳೆಗಳು ಆಲಿಕಲ್ಲು ಮಳೆ ರಭಸಕ್ಕೆ ಹಾನಿಯಾಗಿದ್ದು, ಲಕ್ಷಾಂತರ ರೂ. ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.