ಜಿಲ್ಲೆ

ಆಲದಹಳ್ಳಿಯಲ್ಲಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬ ಆಚರಣೆ

ಗಂಡಸಿ: ಗ್ರಾಮ ದೇವತೆಗಳಾದ ಶ್ರೀಉಡುಸಲಮ್ಮ, ಶ್ರೀಸೋಮೇಶ್ವರಸ್ವಾಮಿ, ಶ್ರೀ ಬೀರಲಿಂಗೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 93ನೇ ವರ್ಷದ ಹುಟ್ಟುಹಬ್ಬವನ್ನು ಶನಿವಾರ ರಾತ್ರಿ ಹೋಬಳಿಯ ಆಲದಹಳ್ಳಿ ಗ್ರಾಮದಲ್ಲಿ ಆಚರಿಸಲಾಯಿತು.

ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್, ಮಣ್ಣಿನ ಮಗ ದೇವೇಗೌಡರು ದೇಶದ 11 ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಕರ್ನಾಟಕ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ನೀರಾವರಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ರೈತರ ಮಕ್ಕಳು ಸಹ ಪ್ರಧಾನಿ ಹುದ್ದೆ ಅಲಂಕರಿಸಿ ನಿಭಾಯಿಸಬಲ್ಲರು ಎಂಬುದನ್ನು ತನ್ನ ನಿಸ್ವಾರ್ಥ ರಾಜಕಾರಣ, ಅನುಪಮ ಸೇವೆ ಮೂಲಕ ತೋರಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಆರೋಗ್ಯವಂತರಾಗಿ ಬಾಳಿ, ಬದುಕಿ ಯುವ ನಾಯಕರಿಗೆ ಮಾರ್ಗದರ್ಶನ ನೀಡಿ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಜೆಡಿಎಸ್ ಮುಖಂಡರಾದ ಹೊಸೂರು ಗಂಗಾಧರ್, ಹುಲ್ಲೆಕೆರೆ ಕುಮಾರ್, ವಕೀಲ ದೇವರಾಜು, ಕೊಂಡೆನಾಳು ವಿಜಯ್, ಬಸವರಾಜು, ನಾಗರಹಳ್ಳಿ ಮಂಜು, ಗಂಡಸಿ ಮುರಳಿ, ಆಲದಳ್ಳಿ ಪುಟ್ಟರಾಜ್ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.