ತುಮಕೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವತಿಯಿಂದ ಆಲದಮರ ಪಾರ್ಕ್ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ’ಯಲ್ಲಿ ನಗರದ ವಿವಿಧ ಶಾಲೆಗಳ 2 ಸಾವಿರಕ್ಕೂ ಅಧಿಕ ಮಕ್ಕಳು ಪಾಲ್ಗೊಂಡರು.ನಗರದ ಬಿ.ಎಚ್.ರಸ್ತೆಯ ಸರ್ಕಾರಿ ಹೈಸ್ಕೂಲ್ ಆವರಣದಲ್ಲಿರುವ ಆಲದಮರ ಪಾರ್ಕ್ (ಪ್ರೆಸ್‌ಕ್ಲಬ್) ಆವರಣದ ಉದ್ದಕ್ಕೂ ಬ್ರೆಷ್, ಬಣ್ಣಗಳನ್ನು ಹಿಡಿದ ಮಕ್ಕಳ ಕಲರವ ಕಣ್ಣಿಗೆ ಓಕಳಿ ಹಬ್ಬದಂತಿತ್ತು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯ ಕೂಡ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಮಹಾಸಂಕಲ್ಪಕ್ಕೆ ಸಹಯೋಗ ನೀಡಿದ್ದವು. ಬುಧವಾರ ಬೆಳಗ್ಗೆ 9ಕ್ಕೆ ಪಾರ್ಕ್‌ಗೆ ಆಗಮಿಸಲಾರಂಭಿಸಿದ ಮಕ್ಕಳು ಶಿಸ್ತಿನ ಸಿಪಾಯಿಗಳಂತೆ ಸರದಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಂಡು, ನಿಗದಿತ ಸಮಯದಲ್ಲಿ ಸೃಜನಾತ್ಮಕ ಚಿತ್ರಗಳನ್ನು ಬಿಡಿಸಿದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ವಿಜಯವಾಣಿ/ದಿಗ್ವಿಜಯ ನ್ಯೂಸ್ ವತಿಯಿಂದ ಪ್ರಮಾಣಪತ್ರ ನೀಡಲಾಯಿತು.ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪರಸರ ಸಂರಕ್ಷಣೆಗೆ ಇಂದಿನ ಜಗತ್ತಿನ ಹೊಣೆಯಾಗಿದ್ದು, ವಿಆರ್‌ಎಲ್ ಮಾಧ್ಯಮ ಸಂಸ್ಥೆ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿರುವುದು ಶ್ಲಾಘನೀಯ ಎಂದರು. ತುಮಕೂರಿನ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಆಯ್ಕೆ ಮಾಡಿಕೊಂಡಿರುವ ಆಲದಮರದ ಪಾರ್ಕ್ ಕೂಡ ಪೂರಕವಾಗಿದೆ. ಶಾಲೆಯಿಂದಲೇ ಮಕ್ಕಳಲ್ಲಿ ಪರಿಸರದ ಉಳಿವು ಸಾಧ್ಯ ಎಂದರು. ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ವೈ,ಎಸ್.ಪಾಟೀಲ ಹಾಗೂ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಕ್ಕಳು ಚಿತ್ರ ಬಿಡಿಸುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಪರಿಸರ ಜಾಗೃತಿಯ ಬಗ್ಗೆ ಮಾತನಾಡಿದರು. ಮಕ್ಕಳು ಬಿಡಿಸಿದ್ದ ಚಿತ್ರಗಳಲ್ಲಿರುವ ಪರಿಸರ ಕಾಳಜಿ ಬಗ್ಗೆ ಮಕ್ಕಳಿಂದಲೇ ಕೇಳಿ ತಿಳಿದುಕೊಂಡು ಮೆಚ್ಚುಗೆ ಸೂಚಿಸಿದರು. ಬಹುಮಾನ ವಿತರಣೆ ಸಮಾರಂಭದಲ್ಲಿ ಸಿದ್ಧಗಂಗಾ ವೈದ್ಯಕೀಯ ಕಾಲೇಜು ಪ್ರಾಚಾರ್ಯೆ ಡಾ.ಎಂ.ಶಾಲಿನಿ, ಸಿದ್ಧಗಂಗಾ ಆಸ್ಪತ್ರೆಯ ರೂಪಾ, ಕಾಂತರಾಜು, ಸರ್ಕಾರಿ ಚಿತ್ರಕಲಾ ಸ್ಫರ್ಧೆ ಪ್ರಾಚಾರ್ಯ ಬಾರಕೇರ್ ಇದ್ದರು. ಉದ್ಘಾಟನಾ ಸಮಾರಂಭದಲ್ಲಿ ವೃಕ್ಷಮಿತ್ರ ಸಂಚಾಲಕ ಪ್ರೊ.ಸಿದ್ದಪ್ಪ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ವೈದ್ಯಾಧಿಕಾರಿ ಡಾ.ನಿರಂಜನ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ಎಚ್.ವಿ.ಪಲ್ಲವಿ, ಡಿಡಿಪಿಯು ಬಸವಲಿಂಗಪ್ಪ, ಸಿದ್ಧಗಂಗಾ ಮಹಿಳಾ ಪಿಯು ಕಾಲೇಜು ನಿವೃತ್ತ ಪ್ರಾಚಾರ್ಯ ಕೆ.ಸಿ.ಜಯಸ್ವಾಮಿ, ವರ್ಣೋದಯ ಆರ್ಟ್ ಗ್ರೂಪ್ ಟ್ರಸ್ಟ್ ಅಧ್ಯಕ್ಷ ಕಿಶೋರ್‌ಕುಮಾರ್ ಹಾಗೂ ಪದಾಧಿಕಾರಿಗಳು, ಎಬಿವಿಪಿ ಪ್ರಮುಖ್ ಅಪ್ಪುಪಾಟೀಲ್, ಸ್ಥಳೀಯ ಮುಖಂಡ ಓಂಕಾರ್ ಇದ್ದರು.
ಎರಡು ವಿಭಾಗದಲ್ಲಿ ಪ್ರಶಸ್ತಿ: ಎರಡು ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. 5,6 ಮತ್ತು 7ನೇ ತರಗತಿ-ಜೂನಿಯರ್ ವಿಭಾಗ ಹಾಗೂ ಹೈಸ್ಕೂಲ್ ತರಗತಿಯವರಿಗೆ ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಯಿತು. ಚಿತ್ರ ಬಿಡಿಸಲು 2 ಗಂಟೆ ಕಾಲಾವಕಾಶ ನೀಡಲಾಗಿದ್ದು, ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಮಕ್ಕಳು ಏಕಾಗ್ರತೆಯಿಂದ ಚಿತ್ರ ಬಿಡಿಸಿ ಸಂಭ್ರಮಿಸಿದರು. ಜೂನಿಯರ್ ವಿಭಾಗದ ಮಕ್ಕಳು ವಾಟರ್ ಕಲರ್, ಮಿಕ್ಸ್ ಮೀಡಿಯಾ, ಕಲರ್‌ಪೆನ್, ಸ್ಕೆಚ್‌ಪೆನ್, ಪೆನ್ಸಿಲ್ ಮೂಲಕ ಹಾಗೂ ಸೀನಿಯರ್ ವಿಭಾಗದವರು ವಾಟರ್ ಕಲರ್ ಮತ್ತು ಪೋಶೋ ಕಲರ್ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು.
ವಿಆರ್‌ಎಲ್ ಮೀಡಿಯಾ ಕಾರ್ಯಕ್ಕೆ ಡಿಸಿ ಮೆಚ್ಚುಗೆ: ಮಕ್ಕಳನ್ನು ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿರುವುದು ಶ್ರೇಷ್ಠಕಾರ್ಯ ಎನಿಸಿದೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವತಿಯಿಂದ ಆಯೋಜಿಸಿರುವ ಪರಿಸರ ದಿನಾಚರಣೆ ಅರ್ಥಪೂರ್ಣವಾಗಿದೆ. ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದರಿಂದ ಸಮಾಜಕ್ಕೆ ಪರಿಸರ ಬಗ್ಗೆ ಜಾಗೃತಿ ಪ್ರಸಾರಕ್ಕೆ ಸಂವಹನವಾಗಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ಸಮಾರೋಪದಲ್ಲಿ ಮಾತನಾಡಿದ ಅವರು, ತುಮಕೂರಿನ ಆಲದಮರದ ಪಾರ್ಕ್ ಪರಿಸರ ಜಾಗೃತಿಯ ಬಗ್ಗೆ ಅರಿವು ಮೂಡಿಸುವ ಉತ್ತಮ ಸ್ಥಳ ಎನಿಸಿದ್ದು, ಇಂತಹ ಜಾಗದಲ್ಲಿ ಸಾವಿರಾರು ಮಕ್ಕಳನ್ನು ಒಟ್ಟಿಗೆ ಸೇರಿಸಿ ಪರಿಸರ ಸಂರಕ್ಷಣೆ ಬಗ್ಗೆ ಚಿತ್ರಬಿಡಿಸುವಂತೆ ಅವಕಾಶ ನೀಡಿರುವುದು ಉತ್ತಮ ಕಾರ್ಯ ಎಂದರು. ವಿಆರ್‌ಎಲ್ ಮಾಧ್ಯಮ ಸಂಸ್ಥೆ ಇಂತಹ ಸಮಾಜಮುಖಿ ಕಾರ್ಯಕ್ರಗಳನ್ನು ಆಯೋಜಿಸುವ ಮೂಲಕ ಸದಾ ಗಮನ ಸೆಳೆಯುತ್ತದೆ. ವಿಶ್ವಪರಿಸರ ದಿನಾಚರಣೆಯಲ್ಲಿ ನಗರ ಎಲ್ಲ ಶಾಲೆಗಳ ಮಕ್ಕಳನ್ನು ಭಾಗವಹಿಸುವಂತೆ ಮಾಡಿರುವುದು ಅಭಿನಂದನಾರ್ಹ ಎಂದರು.