ಮೈಸೂರು: ಆರ್‌ಬಿಐ ನೌಕರರೆಂದು ಸಾರ್ವಜನಿಕರಿಗೆ ನಂಬಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ನಕಲಿ ದಾಖಲಾತಿಗಳು ಹಾಗೂ 3 ದುಬಾರಿ ಕಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಹೆಬ್ಬಾಳದ ನಿವಾಸಿ ಎನ್.ಮಂಜು(30), ನಂಜನಗೂಡು ತಾಲೂಕಿನ ಎಂ.ಕೊಂಗಹಳ್ಳಿ ಮೂಲದ ಶ್ರೀರಾಂಪುರದ ನಿವಾಸಿ ಬಿ.ಶಂಕರ್(42) ಬಂಧಿತರು.
30 ಲಕ್ಷ ರೂ. ಕೊಟ್ಟು ವಂಚನೆಗೆ ಒಳಗಾದ ನಗರದ ಕೆಎಸ್‌ಆರ್‌ಟಿಸಿ ಬಡಾವಣೆಯ ನಿವಾಸಿಯೊಬ್ಬರು ಮೈಸೂರು ನಗರದ ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಕೆಆರ್‌ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆಸ್ಪತ್ರೆ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಹಲವಾರು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿ, ಜನರಿಗೆ ಹಣವನ್ನು ದ್ವಿಗುಣಗೊಳಿಸುವುದಾಗಿ ನಂಬಿಸಿದ್ದರು. ಅದಕ್ಕಾಗಿ ಆರ್‌ಬಿಐನ ನಕಲಿ ದಾಖಲಾತಿಗಳನ್ನು ಸೃಷ್ಟಿಸಿದ್ದರು. ಅಮಾಯಕರಿಂದ ಕೋಟ್ಯಂತರ ರೂ. ಪಡೆದು ವಂಚಿಸಿ, ದುಬಾರಿ ಕಾರ್‌ಗಳಲ್ಲಿ ಓಡಾಡುತ್ತಾ, ಬೆಂಗಳೂರು, ದೆಹಲಿ, ಮುಂಬೈ ಹಾಗೂ ಇತರ ಸ್ಥಳಗಳಿಗೆ ವಿಮಾನದ ಮೂಲಕ ಓಡಾಡಿಕೊಂಡು, ಸ್ಟಾರ್ ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡಿ ಹಣ ಖರ್ಚು ಮಾಡಿ, ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.
ಆರೋಪಿಗಳಿಂದ ಆರ್‌ಬಿಐನ ನಕಲಿ ದಾಖಲಾತಿಗಳು, ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್‌ಟಾಪ್, ಪ್ರಿಂಟರ್ಸ್, 25 ಆರ್‌ಬಿಐನ ನಕಲಿ ಬಾಂಡ್ ಪೇಪರ್‌ಗಳು, 2 ಸೀಲ್‌ಗಳು, ಆರೋಪಿ ಮಂಜುಗೆ ಸಂಬಂಧಿಸಿದ ವಿವಿಧ ಬ್ಯಾಂಕ್‌ಗಳ ಪಾಸ್ ಪುಸ್ತಕಗಳು, ಚೆಕ್ ಪುಸ್ತಕಗಳು, ಮಾರುತಿ ಸುಜುಕಿ ಬಲೇನೋ, ಬಿಎಂಡಬ್ಲುೃ, ಮಹೇಂದ್ರ ಎಕ್ಸ್‌ಯುವಿ500 ಕಾರ್‌ಗಳನ್ನು ಜಪ್ತಿ ಮಾಡಲಾಗಿದೆ.