ಜಿಲ್ಲೆ

ಆರ್‌ಎಸ್‌ಎಸ್ ಶಾಲೆಗೆ ಸರ್ಕಾರದ ಹಣ

ನಾಗಮಂಗಲ: ಸರ್ಕಾರಿ ಶಾಲೆಗೆ ಹೋಗಬೇಕಾದ ಹಣವನ್ನು ಆರ್‌ಎಸ್‌ಎಸ್ ಶಾಲೆಗಳಿಗೆ ನೀಡಲಾಗುತ್ತಿದೆ ಎನ್ನುವ ಆರೋಪವಿದೆ. ಈ ಹಿನ್ನೆಲೆಯಲ್ಲಿ ವಿಷಯವನ್ನು ಹೊರಗೆ ತೆಗೆಯುವ ಬಗ್ಗೆ ಚರ್ಚೆ ನಡೆದಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ ರಾಜೀವ್‌ಗೌಡ ಹೇಳಿದರು.


ತಾಲೂಕಿನ ಅಂಚೆಭೂವನಹಳ್ಳಿಯಲ್ಲಿ ಶುಕ್ರವಾರ ಪಾದಯಾತ್ರೆಯ ನಡುವೆ ಶಿಕ್ಷಕರು, ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಮತ್ತು ಶಿಕ್ಷಣ ತಜ್ಞರೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದರು.


ದೇಶದಲ್ಲಿ ಎಜುಕೇಷನ್ ಎಮರ್ಜೆನ್ಸಿ ಸೃಷ್ಟಿಯಾಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಆದ ಶಿಕ್ಷಣ ನೀತಿಗಳ ಬಗ್ಗೆ ಚರ್ಚೆ ನಡೆದಿದೆ. ನೂತನ ಶಿಕ್ಷಣ ನೀತಿ ಬಂದ ಮೇಲೆ ಸಮಸ್ಯೆಗಳಾಗುತ್ತಿವೆ. ಹಾನಿಕಾರಕ ಅಂಶಗಳು ಶಿಕ್ಷಣ ಕ್ಷೇತ್ರದಲ್ಲಿ ಬರುತ್ತಿವೆ ಎಂದರು.


ಪಠ್ಯ ಪುಸ್ತಕದಲ್ಲಿ ಸಾವರ್ಕರ್ ಕುರಿತು ಬರೆದ ಪಠ್ಯದಲ್ಲಿ ಬುಲ್ಬುಲ್ ಹಕ್ಕಿ ಹಿಡಿದುಕೊಂಡು ಬರುತ್ತಿದ್ದರು ಎನ್ನಲಾಗಿದೆ. ಹೊಸ ಹೊಸ ವಿಷಯವನ್ನು ಸೃಷ್ಟಿ ಮಾಡಿ ಐಡಿಯಾಲಜಿ ತುಂಬುವ ಪ್ರಯತ್ನಕ್ಕೆ ಇದು ಉದಾಹರಣೆಯಾಗಿದೆ. ಸರ್ಕಾರಿ ಶಾಲೆಗಳಿಗೆ ಸರಿಯಾದ ಅನುದಾನ ನೀಡುತ್ತಿಲ್ಲ. ಪರಿಣಾಮ ಪಾಲಕರು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ. ಹೊಸ ರೀತಿಯ ಕಾಸ್ಟ್ ಸಿಸ್ಟಮ್ ಬಂದು ಸಮಸ್ಯೆಗಳು ಸೃಷ್ಟಿ ಆಗುತ್ತಿವೆ ಎಂದು ದೂರಿದರು.


ಕೋವಿಡ್ ಸಂದರ್ಭದಲ್ಲಿ 2 ವರ್ಷ ಶಾಲೆಗಳನ್ನು ಮುಚ್ಚಲಾಗಿತ್ತು. ಈ ಅವಧಿಯಲ್ಲಿ ಇಂಟರ್‌ನೆಟ್‌ನಲ್ಲಿ ಪಾಠ ಕಲಿತವರು ಉಳ್ಳವರ ಮಕ್ಕಳು ಮಾತ್ರ. ಬಡವರ ಮಕ್ಕಳು ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಹಿಜಾಬ್ ವಿವಾದದಿಂದ ಹೆಣ್ಣು ಮಕ್ಕಳಿಗೆ ಅವಕಾಶ ಸಿಗುತ್ತಿಲ್ಲ ಎನ್ನುವ ಚರ್ಚೆ ರಾಹುಲ್ ಗಾಂಧಿ ಅವರೊಂದಿಗೆ ಆಗಿದೆ. ಪ್ರಣಾಳಿಕೆ ಸಿದ್ಧಪಡಿಸುವಾಗ ಕಾಂಗ್ರೆಸ್ ಈ ಎಲ್ಲ ಅಭಿಪ್ರಾಯಗಳನ್ನು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾಷನಲ್ ಎಜುಕೇಷನ್ ಪಾಲಿಸಿ ಕಿತ್ತು ಹಾಕ್ತೀವಿ ಎಂದರು.


ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಎಜುಕೇಷನ್ ಎಮರ್ಜೆನ್ಸಿ ನಮ್ಮ ರಾಜ್ಯದಲ್ಲಿರುವುದು ನಿಜ. ಸೆಂಟ್ರಲೈಜೇಷನ್, ಕಮರ್ಷಿಯಲೈಜೇಷನ್, ಕಮ್ಯೂನಿಸಂ ಅನ್ನು ಬಿಜೆಪಿ ಹೇರುತ್ತಿದೆ. ಪಠ್ತಪುಸ್ತಕ ಪರಿಷ್ಕರಣೆ, ವೈಜ್ಞಾನಿಕ ಮನೋಭಾವನೆ ಬಿಟ್ಟು ಸಂವಿಧಾನವನ್ನು ಉಳಿಸುವ ಕಾಯಕ ಶಾಲೆಗಳಿಂದ ಆರಂಭವಾಗಬೇಕು. ಉತ್ತರಪ್ರದೇಶ ಮಾದರಿಯಲ್ಲಿ ಕೇಸರೀಕರಣ ಮಾಡುತ್ತಿದ್ದಾರೆ. 27 ಸಾವಿರ ವಿದ್ಯಾರ್ಥಿಗಳು ಹಿಜಾಬ್ ಪ್ರಕರಣದಿಂದ ಶಾಲೆ ತ್ಯಜಿಸಿದ್ದಾರೆ ಎಂದರು.

ಒಂದೇ ಮಾದರಿಯ ಗುಣಮಟ್ಟದ ಶಿಕ್ಷಣ
ಮಂಡ್ಯದ ಪೂರ್ಣಿಮಾ ಎಂಬುವರು ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ನೀಡುತ್ತಿಲ್ಲ. ಶಿಕ್ಷಕರ ನೇಮಕ ಸೇರಿದಂತೆ ಸೌಕರ್ಯ ಒದಗಿಸುತ್ತಿಲ್ಲ. ಇದರಿಂದಾಗಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡಲಾಗುತ್ತಿದೆ. ಈ ಕುರಿತು ನಿಮ್ಮ ಪ್ರಣಾಳಿಕೆ ಏನೆಂದು ಪ್ರಶ್ನಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌ಗಾಂಧಿ, ಹಣವಂತರಿಗೆ ಮಾತ್ರ ಉತ್ತಮ ಶಿಕ್ಷಣ ಸಿಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಮಾನ ಶಿಕ್ಷಣದ ಅವಶ್ಯಕತೆ ಇದೆ. ಆದ್ದರಿಂದ ಎಲ್ಲರಿಗೂ ಒಂದೇ ಮಾದರಿಯ ಗುಣಮಟ್ಟದ ಶಿಕ್ಷಣ ನೀಡುವುದಾಗಿ ಭರವಸೆ ನೀಡಿದರು.


ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ, ಛತ್ತಿಸ್‌ಗಢ ಹಾಗೂ ಬೆಂಗಳೂರಿನಲ್ಲಿ ನಮ್ಮ ಪಕ್ಷದ ಶಾಸಕರಿರುವ ಕ್ಷೇತ್ರಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಆದರೆ, ನಮ್ಮ ಇತಿಹಾಸವನ್ನು ಬದಲಾಯಿಸಲು ಬಿಜೆಪಿ ಮುಂದಾಗಿದೆ. ನಾವು ಪಕ್ಷದ ಪ್ರಣಾಳಿಕೆ ಮಾಡಲ್ಲ. ಜನರು ಕೇಳಿದ್ದನ್ನೇ ಪ್ರಣಾಳಿಕೆಯಾಗಿ ರಚಿಸುತ್ತೇವೆ. ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದರು.