ಜಿಲ್ಲೆ

ಆರ್‌ಸಿ, ಡಿಎಲ್ ಸ್ಮಾರ್ಟ್ ಕಾರ್ಡ್‌ಗೆ ಪರದಾಟ

ಚಾಮರಾಜನಗರ: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೀಡುವ ಸ್ಮಾರ್ಟ್‌ಕಾರ್ಡ್ ಅಲಭ್ಯತೆಯಿಂದಾಗಿ ವಾಹನಗಳ ಆರ್‌ಸಿ ಮತ್ತು ಡಿಎಲ್‌ಗಳಿಗೆ ಜನರು ಕಳೆದ ತಿಂಗಳಿಂದಲೂ ಪರದಾಡುವಂತಾಗಿದೆ.

ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ 2366 ವಾಹನ ನೋಂದಣಿ ಕಾರ್ಡ್ (ಆರ್‌ಸಿ) ಮತ್ತು 1201 ಟ್ರೈವಿಂಗ್ ಲೈಸನ್ಸ್ (ಡಿಎಲ್) ಕಾರ್ಡ್‌ಗಳು ಬರಬೇಕಿದ್ದು, ಕಳೆದ 2 ತಿಂಗಳಿಂದಲೂ ಜನರು ಕಾರ್ಡ್‌ಗಳಿಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ನಿತ್ಯವೂ ಅಲೆದಾಡುವಂತಾಗಿದೆ. ಡಿಎಲ್ ನಂತರ ಆರ್‌ಸಿ ಕಾರ್ಡ್ ಮಾಡಿಸಿ ತಿಂಗಳು ಕಳೆದರೂ ಕೂಡ ವಾಹನ ಸವಾರರಿಗೆ ಸ್ಮಾರ್ಟ್‌ಕಾರ್ಡ್‌ಗಳು ಲಭ್ಯವಾಗುತ್ತಿಲ್ಲ. ಪರಿಣಾಮವಾಗಿ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಪ್ರತಿನಿತ್ಯವೂ ಕಚೇರಿಗೆ ಬರುವ ಜನರು ಕಾರ್ಡ್ ಬಂದಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಾಮಕಿಯೂ ಉಂಟಾಗುತ್ತಿದ್ದು, ವಾಹನ ಸವಾರರು ಹಲವಾರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಟೆಂಡರ್ ಕರೆಯದೇ ಸಮಸ್ಯೆ:

ಸಾರಿಗೆ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ವಿತರಣೆ ಗುತ್ತಿಗೆ ಪಡೆದಿರುವ ರೋಸ್ ಮೆರ್ಟಾ ಎಂಬ ಕಂಪನಿಯ ಟೆಂಡರ್ ಅವಧಿ ಡಿ.24 ರಂದು ಪೂರ್ಣಗೊಂಡಿದೆ. ಅಲ್ಲಿಂದ ಇಲ್ಲಿಯವರೆಗೂ ಕಾರ್ಡ್ ವಿತರಣೆಗೆ ಸಮಸ್ಯೆ ಉಂಟಾಗಿದೆ. ಮತ್ತೆ ಹೊಸದಾಗಿ ಟೆಂಡರ್ ಕರೆಯುವವರೆಗೂ ವಾಹನ ಚಾಲಕರು ಸಮಸ್ಯೆ ಅನುಭವಿಸಬೇಕೆ? ಅಥವಾ ಇಲಾಖೆ ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತದೆಯೇ ಕಾದು ನೋಡಬೇಕಿದೆ. ಈಗಾಗಲೇ 3000 ಕ್ಕೂ ಅಧಿಕ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದ್ದು, 2366 ಆರ್‌ಸಿ ಮತ್ತು 1201 ಡಿಎಲ್ ಕಾರ್ಡ್‌ಗಳು ಬರಬೇಕಿದೆ. ಜ.1 ರಿಂದ ಇಲ್ಲಿಯವರೆಗೆ ನೋಂದಣಿಗೆ ಅರ್ಜಿ ಸಲ್ಲಿಸಿರುವವರಿಗೂ ಅನುಮೋದನೆ ನೀಡಲಾಗಿದೆ. 40-50 ಅರ್ಜಿದಾರರಿಗೆ ಅನುಮೋದನೆ ನೀಡುವುದು ಬಾಕಿ ಇದೆ ಎಂದು ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿ ಗಾಯಿತ್ರಿ ವಿಜಯವಾಣಿಗೆ ಮಾಹಿತಿ ನೀಡಿದರು.

ಸಮಸ್ಯೆ ಅನುಭವಿಸುತ್ತಿರುವ ಚಾಲಕರು:

ಜಿಲ್ಲೆಯ ಹಲವಾರು ಯುವಕರು ಆಟೋ, ಗೂಡ್ಸ್ ವಾಹನಗಳು ಹಾಗೂ ಇನ್ನಿತರೆ ವಾಹನಗಳನ್ನು ಲೋನ್ ರೂಪದಲ್ಲಿ ತೆಗೆದುಕೊಂಡಿರುತ್ತಾರೆ. ಹಲವಾರು ೈನಾನ್ಸ್ ಕಂಪನಿಗಳಲ್ಲಿ ಲೋನ್ ಅನುಮೋದನೆ ಆಗಬೇಕಾದರೇ ಆರ್‌ಸಿ ಕಾರ್ಡ್ ಅಗತ್ಯವಿದೆ. ಆದರೇ ತಿಂಗಳಿಂದ ಕಾರ್ಡ್‌ಗಳು ಲಭ್ಯವಿಲ್ಲದೇ ಲೋನ್‌ಗಳು ಅನುಮೋದನೆಯಾಗದೇ ಸಮಸ್ಯೆ ಅನುಭವಿಸುವಂತಾಗಿದೆ. ಎರಡನೇ ಪಾರ್ಟಿಯಿಂದ ವಾಹನಗಳನ್ನು ಖರೀದಿಮಾಡಿ ಅವರಿಗೆ ಹಣ ಕಟ್ಟಲಾರದೇ ತೊಂದರೆ ಪಡುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಆಟೋ ಮತ್ತು ಇನ್ನಿತರೆ ವಾಹನಗಳನ್ನು ತೆಗೆದುಕೊಂಡಿರುವವರು ಸಾಲ ಮಾಡಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಆರ್‌ಸಿ ಮತ್ತು ಡಿಎಲ್ ಕಾರ್ಡ್‌ಗಳನ್ನು ವಿತರಣೆ ಮಾಡಲು ವ್ಯವಸ್ಥೆ ಮಾಡಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ.

ಮಧ್ಯವರ್ತಿಗಳ ಹಾವಳಿ:

ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರಿಗಿಂತಲೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ವಾಹನ ಚಾಲಕರಿಗೆ ಸರ್ಕಾರ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡುವ ಮೂಲಕ ಅನುಕೂಲ ಕಲ್ಪಿಸಿದ್ದರೇ, ಮಧ್ಯವರ್ತಿಗಳ ಮೂಲಕ ಹೋದರೆ ಮಾತ್ರ ಕೆಲಸಗಳು ಆಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಸಾರಿಗೆ ಕಚೇರಿಯಲ್ಲಿ ಹಣ ಕೊಟ್ಟರೇ ಮಾತ್ರ ಕೆಲಸವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಮಧ್ಯವರ್ತಿಗಳು ಮತ್ತು ಇಲಾಖೆಯ ಅಧಿಕಾರಿಗಳ ಜತೆಗೆ ಸಂಪರ್ಕವಿದ್ದು, ಹಣ ಕೊಟ್ಟರೇ ಮಾತ್ರ ಇಲ್ಲಿ ಕೆಲಸಗಳಾಗುತ್ತದೆ. ಮಧ್ಯಮ ಮತ್ತು ಬಡ ಕುಟುಂಬಗಳ ಜನರು ನಿತ್ಯವೂ ಕಚೇರಿಗೆ ಅಲೆಯುವಂತಾಗಿದೆ ಎಂದು ಆಟೋ ಮಾಲೀಕ ಮಹದೇವಪ್ರಸಾದ್ ಆರೋಪಿಸಿದರು.

ಸ್ಮಾರ್ಟ್‌ಕಾರ್ಡ್ ವಿತರಣೆ ಮಾಡುತ್ತಿದ್ದ ಕಂಪನಿಯ ಟೆಂಡರ್ ಅವಧಿ ಡಿ.24 ರಂದು ಪೂರ್ಣಗೊಂಡಿದೆ. ರಾಜ್ಯಮಟ್ಟದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಬೇಕಿದೆ.

-ಗಾಯಿತ್ರಿ, ಆರ್‌ಟಿಓ, ಪ್ರಾದೇಶಿಕ ಸಾರಿಗೆ ಕಚೇರಿ, ಚಾಮರಾಜನಗರ

ಕಳೆದ ತಿಂಗಳಿಂದಲೂ ಆರ್‌ಸಿ ಮತ್ತು ಡಿಎಲ್ ಕಾರ್ಡ್‌ಗಳಿಗೆ ಸಾರಿಗೆ ಕಚೇರಿಗೆ ಅಲೆದಾಡುವಂತಾಗಿದೆ. ಅಧಿಕಾರಿಗಳನ್ನು ಕೇಳಿದರೇ ಟೆಂಡರ್ ಮುಗಿದಿದೇ ಎಂಬ ಉತ್ತರವನ್ನಷ್ಟೇ ನೀಡುತ್ತಾರೆ. ಆರ್‌ಟಿಓ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದ್ದು, ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ.

-ಮಹದೇವಪ್ರಸಾದ್, ಆಟೋ ಮಾಲೀಕ, ನಾಗವಳ್ಳಿ, ಚಾಮರಾಜನಗರ