ಜಿಲ್ಲೆ

ಆರ್ಯುವೇದ ಚಿಕಿತ್ಸೆಗೆ ಇಂದಿಗೂ ಮಹತ್ವ

ಚಾಮರಾಜನಗರ: ಆಧುನಿಕ ಚಿಕಿತ್ಸಾಕ್ರಮಗಳು ಬರುವುದಕ್ಕಿಂತಲೂ ಮುಂಚೆಯೇ ಆರ್ಯವೇದ ಚಿಕಿತ್ಸೆಯ ಮೂಲಕ ಅನೇಕ ಕಾಯಿಲೆಗಳನ್ನು ಗುಣಪಡಿಸಲಾಗುತ್ತಿತ್ತು, ಅಂತೆಯೇ ಆರ್ಯವೇದ ಚಿಕಿತ್ಸೆ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದಲ್ಲಿ ಆರ್ಯುವೇದ ಚಿಕಿತ್ಸೆ ದೇವಾನುದೇವತೆಗಳ ಕಾಲದಿಂದಲೂ ರೂಢಿಯಲ್ಲಿ ಇತ್ತು ಎಂದು ಹೇಳಲಾಗುತ್ತದೆ. ಅನೇಕ ಋಷಿ ಮುನಿಗಳು ಹಾಗೂ ಪಂಡಿತರು ಆರ್ಯುವೇದ ಚಿಕಿತ್ಸೆಯ ಮೂಲಕ ಹಲವಾರು ಕಾಯಿಲೆಗಳನ್ನು ಗುಣಪಡಿಸುತ್ತಿದ್ದರು. ಅಂತೆಯೇ ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಜನರು ಆರ್ಯುವೇದ ಚಿಕಿತ್ಸೆಯತ್ತಾ ಮುಖಮಾಡುತ್ತಿದ್ದಾರೆ. ಆರ್ಯುವೇದ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಅನೇಕ ಕಾಯಿಲೆಗಳಿಗೆ ಸೊಪ್ಪಿನ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಸಾಕು ಪ್ರಾಣಿಗಳಿಗೂ ಕೂಡ ಆರ್ಯುವೇದದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಇಂದಿಗೂ ಜನರು ಆರ್ಯುವೇದ ಅಥವಾ ನಾಟಿ ವೈದ್ಯಕೀಯದಲ್ಲಿ ಪ್ರಾಮಾಣಿಕ ಸೇವೆ ಇರುತ್ತದೆ ಎಂದು ಭಾವಿಸಿದ್ದಾರೆ. ಆಯುಷ್ ಇಲಾಖೆಯಲ್ಲಿ ಹೆಚ್ಚಿನ ವೈದ್ಯರು ಇದ್ದು, ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, 2016 ರಿಂದ ಧನ್ವಂತರಿಯ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಆರ್ಯುವೇದ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 8 ಆಯುಷ್ ಆಸ್ಪತ್ರೆಗಳನ್ನು ರಾಷ್ಟ್ರೀಯ ಆಯುಷ್ ಅಭಿಯಾಹನ ಯೋಜನೆಯಡಿ ಆಯುಷ್‌ಮಾನ್ ಆರೋಗ್ಯ ಮಂದಿರವಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಚ್.ವಿ.ಚಂದ್ರು, ನಗರಸಭೆ ಅಧ್ಯಕ್ಷ ಎಸ್.ಸುರೇಶ್, ಸದಸ್ಯರಾದ ಕಲಾವತಿ, ಚುಡಾ ಮಾಜಿ ಅಧ್ಯಕ್ಷ ಸಯ್ಯದ್ ರಫಿ, ಬ್ರೈಟ್ ಕಾಲೇಜು ಪ್ರಾಂಶುಪಾಲ ಪ್ರಜ್ವಲ್, ಪೇಟೆ ಪ್ರೈಮರಿ ಶಾಲೆ ಮುಖ್ಯ ಶಿಕ್ಷಕ ಬಿ.ನಾಗೇಂದ್ರ, ಹಿರಿಯ ವೈದ್ಯಾಧಿಕಾರಿ ಪುನೀತ್ ಬಾಬು, ಡಾ.ಶೈಲಜಾ, ಡಾ.ಸುಧಾ ಹಾಗೂ ಇತರರು ಉಪಸ್ಥಿತರಿದ್ದರು.