ಜಿಲ್ಲೆ

ಆರ್ಥಿಕ ಸುವ್ಯವಸ್ಥೆಗೆ ಭದ್ರ ಬುನಾದಿ ಹಾಕಿದ ಸಿಂಗ್

ಲಲಾಟಾಕ್ಷ ಎಸ್

ಹನೂರು: ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ದೇಶದ ಆರ್ಥಿಕ ಸುವ್ಯವಸ್ಥೆಗೆ ಭದ್ರ ಬುನಾದಿ ಹಾಕಿದವರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಪ್ರತಿಮರು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್ ಬಣ್ಣಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ಧ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ವ್ಯವಸ್ಥೆಯ ಸುಧಾರಣೆಯ ಶಿಲ್ಪಿ ಎಂದು ಪ್ರಸಿದ್ಧಿ ಪಡೆದ ಮನಮೋಹನ್ ಸಿಂಗ್ ಅವರು 1991-96ರ ಅವಧಿಯಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ಈ ವೇಳೆ ದೇಶದ ಆರ್ಥಿಕತೆ ಕೆಳ ಮಟ್ಟದಲ್ಲಿತ್ತು. ಈ ದಿಸೆಯಲ್ಲಿ ದೇಶದ ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಆರ್ಥಿಕ ನೀತಿ, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ, ಉದಾರೀಕರಣ, ಮುಕ್ತ ಮಾರುಕಟ್ಟೆ ಹಾಗೂ ಇನ್ನು ಅನೇಕ ರಚನಾತ್ಮಕ ಕಾರ್ಯಕ್ರಮ, ನೀತಿಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತಿದೆ ಎಂದು ಹೇಳಿದರು.

ನರೇಗಾ ಯೋಜನೆ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, ಬಿಸಿಯೂಟ, ಕಡ್ಡಾಯ ಶಿಕ್ಷಣ ನೀತಿ ಜಾರಿ, ಆಧಾರ್ ಯೋಜನೆ ಹಾಗೂ ಇನ್ನು ಅನೇಕ ದೂರದೃಷ್ಟಿ, ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೊಳಿಸಿದರು. ಅವರ ಅಗಲಿಕೆ ನಿಜಕ್ಕೂ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಿದ್ದರಾಜು, ಪಪಂ ಸದಸ್ಯ ಬಸವರಾಜು, ಕಾಂಗ್ರೆಸ್ ಯೂತ್ ಘಟಕದ ತಾಲೂಕು ಅಧ್ಯಕ್ಷ ಮಾದೇಶ್, ಮುಖಂಡರಾದ ಚಿಕ್ಕತಮ್ಮಯ್ಯ, ವೆಂಕಟರಮಣ ನಾಯ್ಡು, ಮಾದೇಶ್, ರಾಜು, ನಾಗೇಶ್, ಸಿದ್ದನಂಜೇಗೌಡ ಇದ್ದರು.