ಮೈಸೂರು: ಗಂಡು-ಹೆಣ್ಣು ಇಬ್ಬರಿಗೂ ಸಮಾನ ಶೈಕ್ಷಣಿಕ ಎಚ್ಚರ ಮತ್ತು ಆರ್ಥಿಕ ಸಮತೆ ಅನುಷ್ಠಾನಕ್ಕೆ ಬಂದರೆ ಲಿಂಗ ತಾರತಮ್ಯ ನಿವಾರಣೆಯಾಗುತ್ತದೆ ಎಂದು ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪದ್ಮಾಶೇಖರ್ ಅಭಿಪ್ರಾಯಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಸಹಜವಾಗಿ ಮಾತೃ ಹೃದಯಿ. ಸಹ ಜೀವನ, ಹೊಂದಾಣಿಕೆ ಬಾಳ್ವೆ ನಡೆಸುತ್ತಾಳೆ. ಅವಳಿಗೆ ಬದುಕು ಕಟ್ಟುವ ಛಲ ಇದೆ. ಮನುಕುಲ ಬೆಳೆಸುವ ಉತ್ಪಾದಕ ಘಟಕದ ಅಸ್ಮಿತೆ ಇದೆ. ಆದರೆ, ಚರಿತ್ರೆಯನ್ನು ಅವಲೋಕಿಸಿದರೆ ಹೆಣ್ಣನ್ನು ಒಪ್ಪುವುದು ಪುರುಷರಿಗೆ ಅವಮಾನದ ಸಂಗತಿಯಾಗಿದೆ. ಭಾರತ ಮಾತ್ರವಲ್ಲ ಜಗತ್ತಿನಲ್ಲಿಯೇ ಗಂಡು ತಾನೇ ಶ್ರೇಷ್ಠವೆಂದು ಸ್ಥಾಪಿತ ಮೌಲ್ಯಗಳು ಪ್ರತಿಪಾದಿಸಿವೆ ಎಂದರು.
ವೇದ, ಉಪನಿಷತ್ ಎಲ್ಲ ಗ್ರಂಥಗಳಲ್ಲಿಯೂ ಹೆಣ್ಣು ಸಂಸ್ಕೃತಿ ರಕ್ಷಕಿ. ಸಮೃದ್ಧಿಯ ಸಂಕೇತ ಎಂದೆಲ್ಲಾ ಭ್ರಮಾಲೋಕದಲ್ಲಿರಿಸಿದರು. ಪಿತೃ ಪ್ರಧಾನ ಮತ್ತು ಗಂಡಾಳ್ವಿಕೆ ಮಹಿಳೆಯರ ಸ್ವಾತಂತ್ರೃ ನಡವಳಿಕೆಗೆ ಆಸ್ಪದ ಕೊಡಲಿಲ್ಲ. ಹೆಣ್ಣು ತನ್ನ ಬದುಕಿನಲ್ಲಿ ಕಳೆದುಕೊಂಡಿದ್ದೇ ಹೆಚ್ಚು ಎಂದರು.
ಗಂಡಸಿನ ಕೆಲಸ ಯಾಜಮಾನಿಕೆ. ಹೆಣ್ಣಿನದು ದಾಸ್ಯದ ಕೆಲಸ. ಮುತ್ತೈದೆತನ ಪ್ರಾವಿತ್ರೃತೆ ಎಲ್ಲವನ್ನೂ ಹೆಣ್ಣಿಗೆ ಹೇರಲಾಯಿತು. ಇಡೀ ವ್ಯವಸ್ಥೆ ಗಂಡಿಗೆ ಅಧಿಕಾರ ಪ್ರಾಪ್ತ ಮಾಡಿದರೆ, ಹೆಣ್ಣಿಗೆ ಯಾವುದೇ ಅಧಿಕಾರ ನೀಡಲಿಲ್ಲ. ಮನೆಯ ಕೆಲಸಕ್ಕೆ ಸೀಮಿತ ಮಾಡಲಾಯಿತು ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳಾ ದಿನ ಪ್ರತ್ಯೇಕವಾಗಿ ಆಚರಿಸಬೇಕೆ? ಎಲ್ಲ ದಿನವೂ ನಮ್ಮದೇ. ನಮ್ಮನ್ನು ನಾವು ನೋಡಿಕೊಳ್ಳಲು, ನಡೆದು ಬಂದ ದಾರಿ, ಮುಂದಿನ ನಡೆ, ಭವಿಷ್ಯದಲ್ಲಿ ಎದುರಿಸಬೇಕಾದ ಸವಾಲುಗಳು, ಹೆಣ್ಣಿನ ಸಂಕಟಗಳಿಗೆ ಉತ್ತರದಾಯಿತ್ವ ಪಡೆದುಕೊಳ್ಳಲು, ಸಮಾಜದ ಲಿಂಗ ತಾರತಮ್ಯ ವಿರುದ್ಧ ಹೋರಾಟವೇ ನಿಜವಾದ ಮಹಿಳಾ ದಿನಾಚರಣೆ ಆಗಲಿದೆ ಎಂದರು.
ಕರಾಮುವಿ ಶೈಕ್ಷಣಿಕ್ ಡೀನ್ ಪ್ರೊ.ಎನ್.ಲಕ್ಷ್ಮೀ ಮಾತನಾಡಿ, ಮಹಿಳೆಯರಿಗೆ ಕಾನೂನಿನ ಬಲ ಇದ್ದರೂ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ನಿಂತಿಲ್ಲ. ಮಹಿಳೆಯರು ಭೋಗದ ವಸ್ತುವಾಗಿ ಕಾಣಲಾಗುತ್ತಿದೆ. ಇದಕ್ಕೆ ಕಾರಣ ಏನು? ಮಹಿಳೆಯರಿಗೆ ಸಾಮಾಜಿಕ ನ್ಯಾಯ ಸಿಗುವ ತನಕ ಹೋರಾಟ ಕೈಗೊಳ್ಳಬೇಕು ಎಂದರು.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಶಕ್ತಗೊಳಿಸಬೇಕು. ಲಿಂಗ ತಾರತಮ್ಯದ ವಿರುದ್ಧ ಹೋರಾಟ ಮಾಡಬೇಕು. ಎಲ್ಲ ಶಾಸನಬದ್ಧವಾದ ಅಧಿಕಾರ ಸಿಗಬೇಕು. ಆರೋಗ್ಯ ಸ್ಥಿತಿ ಉತ್ತಮವಾಗಿಟ್ಟುಕೊಳ್ಳಬೇಕು. ಸಾಕ್ಷರತೆ ಪಡೆದಿದ್ದೂ ಸಬಲೀಕರಣ ಆಗದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅಧ್ಯಕ್ಷತೆ ವಹಿಸಿದ್ದರು. ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿಯ ಸದಸ್ಯೆ, ಉದ್ಯಮಿ ಪ್ರಾಚೀಗೌಡ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್ ಕುಮಾರ್, ಅಧ್ಯಯನ ವಿಭಾಗದ ಡೀನ್ ಪ್ರೊ.ರಾಮನಾಥಂ ನಾಯ್ಡು ಇದ್ದರು.