ಐತಿಹಾಸಿಕ ಹಿನ್ನೆಲೆ ಇರುವ ಮೈಸೂರು ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡು ಒದ್ದಾಡುತ್ತಿದ್ದು, ಈ ಬಿಕ್ಕಟ್ಟಿನಿಂದ ಹೊರ ಬರುವುದು ಹೇಗೆ ಎಂದು ಚಿಂತೆಗೀಡಾಗಿದೆ...!
ವಿವಿಧ ಮೂಲಗಳಿಂದ ಬರುವ ತೆರಿಗೆಯೂ ನಿರೀಕ್ಷಿತ ಮಟ್ಟದಲ್ಲಿ ಸಂಗ್ರಹವಾಗುತ್ತಿಲ್ಲ. ಆದಾಯಕ್ಕಿಂತ ಖರ್ಚು ಅಧಿಕವಾಗಿದೆ. ಅನುದಾನವಿಲ್ಲದೆ ಕಾಮಗಾರಿ ಕೈಗೊಂಡಿದ್ದು, ಗುತ್ತಿಗೆದಾರರಿಗೆ ಬಾಕಿ ಬಿಲ್ ಕೊಡಲೂ ದುಡ್ಡಿಲ್ಲ. ಹೀಗೆ ತ್ರಿಶಂಕು ಸ್ಥಿತಿಗೆ ಸಿಲುಕಿರುವ ಪಾಲಿಕೆ ಅನುದಾನಕ್ಕಾಗಿ ರಾಜ್ಯ ಸರ್ಕಾರದತ್ತ ಕೈಚಾಚಿದೆ.
ನೀರು ಕರ, ಆಸ್ತಿ ತೆರಿಗೆ, ಟ್ರೇಡ್ ಲೈಸೆನ್ಸ್ ಸೇರಿದಂತೆ ವಿವಿಧ ಮೂಲಗಳಿಂದ ಪಾಲಿಕೆಗೆ ವರ್ಷಕ್ಕೆ ಅಂದಾಜು 1 ಸಾವಿರ ಕೋಟಿ ರೂ. ಕ್ರೋಡೀಕರಣವಾಗುತ್ತದೆ. ಇದರಲ್ಲಿ ಬಹುತೇಕ ಹಣವು ವೇತನ, ನಿರ್ವಹಣೆ, ಅಗತ್ಯ ಕಾಮಗಾರಿಗೆ ಖರ್ಚಾಗಿ ಹೋಗುತ್ತಿದ್ದು, ಬರೀ 70 ಕೋಟಿ ರೂ. ಮಾತ್ರ ಉಳಿಕೆಯಾಗಲಿದೆ. ಇಷ್ಟು ಕಡಿಮೆ ಹಣ ನಗರದ ಅಭಿವೃದ್ಧಿಗೆ ಸಾಕಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಪಾಲಿಕೆಗೆ ಬರೋಬ್ಬರಿ 450 ಕೋಟಿ ರೂ. ಆರ್ಥಿಕ ಹೊಡೆತ ಬಿದ್ದಿದೆ. ಇಷ್ಟು ದೊಡ್ಡ ಮೊತ್ತವನ್ನು ಹೇಗೆ ಹೊಂದಿಸುವುದು ಎಂಬುದೇ ತಿಳಿಯದಾಗಿದೆ. ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ಬಿಲ್ ಕೊಡಲು ಆಗುತ್ತಿಲ್ಲ. ಇದು ಪಾಲಿಕೆ ಆರ್ಥಿಕ ದುಸ್ಥಿತಿಗೆ ಹಿಡಿದ ಕೈಗನ್ನಡಿ. 2017ರಿಂದ ಇಲ್ಲಿಯವರೆಗೆ ಕಾಮಗಾರಿಗಳ ಬಿಲ್ ಉಳಿಸಿಕೊಂಡಿದೆ. ಇದರಲ್ಲಿ 2022, 2023 ಮತ್ತು 2024ನೇ ಸಾಲಿನ ಬಾಕಿ ಬಿಲ್‌ಗಳದ್ದೇ ಸಿಂಹಪಾಲು. ಹಳೇ ಬಿಲ್ ಪಾವತಿ ಮಾಡಲು ಪಾಲಿಕೆಗೆ ಕನಿಷ್ಠ 4 ವರ್ಷಬೇಕು. ಇದು ಯಾವ ಮಟ್ಟದಲ್ಲಿ ಆರ್ಥಿಕ ಸಮಸ್ಯೆ ಗಂಭೀರವಾಗಿದೆ ಎಂಬುದಕ್ಕೆ ಸಾಕ್ಷಿ.
ಅನುದಾನವಿಲ್ಲದೆ ಬೇಕಾಬಿಟ್ಟಿಯಾಗಿ ಕಾಮಗಾರಿ ಕೈಗೊಂಡಿದ್ದೇ ಈ ಆರ್ಥಿಕ ದಿವಾಳಿತನಕ್ಕೆ ಮತ್ತೊಂದು ಕಾರಣ. ಹಣವಿಲ್ಲದೆ ಹೇಗೆ ಕಾಮಗಾರಿ ಕೈಗೊಳ್ಳಲಾಯಿತು? ಎಂಬುದೇ ಯಕ್ಷಪ್ರಶ್ನೆ. ಹಿಂದಿನ ಪಾಲಿಕೆ ಆಯುಕ್ತರಾಗಿದ್ದ, ಈಗ ಜಿಲ್ಲಾಧಿಕಾರಿಯಾಗಿರುವ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅವಧಿಯಲ್ಲೇ 60 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಅನುದಾನವಿಲ್ಲದಿದ್ದರೂ ಕೈಗೆತ್ತಿಕೊಳ್ಳಲಾಗಿದೆ ಎಂಬುದೇ ಅಚ್ಚರಿ.
ಪಾಲಿಕೆಯ ಸಾಮಾನ್ಯ ಅನುದಾನದಡಿ ಕೈಗೊಂಡಿರುವ ಅನೇಕ ಕೆಲಸ-ಕಾರ್ಯಗಳು ಅಡಕತ್ತರಿಗೆ ಸಿಲುಕಿಕೊಂಡಿವೆ.
ಅನುಮೋದನೆಗೊಂಡಿರುವ 100 ಕೋಟಿ ರೂ. ಮೊತ್ತದ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. 64 ಕೋಟಿ ರೂ. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ. 20 ಕೋಟಿ ರೂ. ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ. 100 ಕೋಟಿ ರೂ. ವೆಚ್ಚದ ಕಾಮಗಾರಿ ಕೆಲಸ ಮುಗಿದು ಬಿಲ್ ಬಂದಿದೆ. ಆದರೀಗ ಪಾಲಿಕೆ ಬರಿಗೈ ದಾಸನಂತಾಗಿದೆ.
ನೀರಿನ ಶುಲ್ಕದಲ್ಲಿ ಅರ್ಧದಷ್ಟು ವಸೂಲಾತಿಯಾಗಿಲ್ಲ. ಇದರಿಂದ ಬಾಕಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಸಾಗಿದೆ. 2023-24ನೇ ಸಾಲಿನಲ್ಲಿ 299.27 ಕೋಟಿ ರೂ. ನೀರಿನ ಕರ ಸಂಗ್ರಹವಾಗಬೇಕಿತ್ತು. ಈ ಪೈಕಿ 74.62 ಕೋಟಿ ರೂ. ಮಾತ್ರ ಬಂದಿದ್ದು, 224.65 ಕೋಟಿ ರೂ. ವಸೂಲಾತಿಯಾಗಿಲ್ಲ. ಅಂತೆಯೇ 2024-25ನೇ ಸಾಲಿನಲ್ಲಿ ಈವರೆಗೆ ಬರೀ 62.11 ಕೋಟಿ ರೂ. ಮಾತ್ರ ಕ್ರೋಡೀಕರಣವಾಗಿದ್ದು, 318.15 ಕೋಟಿ ರೂ. ಬೇಡಿಕೆಯಲ್ಲಿ 236.01 ಕೋಟಿ ರೂ. ವಸೂಲಾತಿಯಾಗಿಲ್ಲ.
ರೈಲ್ವೆ, ಪೊಲೀಸ್, ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರಿ ಸಂಸ್ಥೆಗಳೇ ಬಹಳಷ್ಟು ನೀರಿನ ಕರವನ್ನು ಬಾಕಿ ಉಳಿಸಿಕೊಂಡಿವೆ. ಇದು ಸಹ ನೀರಿನ ಶುಲ್ಕ ಸಂಗ್ರಹದಲ್ಲಿ ಗುರಿ ಸಾಧಿಸಿಲು ದೊಡ್ಡ ಅಡ್ಡಿಯಾಗಿದೆ. ಕಳೆದ ಎರಡು ವರ್ಷದಿಂದ 460.66 ಕೋಟಿ ರೂ. ನೀರಿನ ಶುಲ್ಕ ವಸೂಲಾತಿಯೇ ಆಗಿಲ್ಲ. ಇದು ಪಾಲಿಕೆ ವಾರ್ಷಿಕ ಬಜೆಟ್‌ನ ಅರ್ಧದಷ್ಟು ಹಣ.
ಹಿಂದೆ ಭಾಗ್ಯಜಲ ಯೋಜನೆಯಡಿ ಬಡವರ ಮನೆಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಇದು ಸ್ಥಗಿತಗೊಂಡು 1990ರಿಂದ ನೀರಿನ ಬಿಲ್ ನೀರಿನ ಬಳಕೆದಾರರಿಗೆ ಕೊಡಲಾಗಿದೆ. ಉಚಿತ ಎಂಬ ಕಾರಣಕ್ಕೆ ಅವರ‌್ಯಾರು ಬಿಲ್ ಪಾವತಿ ಮಾಡಿಲ್ಲ. ಇದು ವರ್ಷದಿಂದ ವರ್ಷಕ್ಕೆ ಬೆಳೆಯುತ್ತ ಹೋಗಿ ಬಡ್ಡಿ ಸೇರಿ 2, 3 ಲಕ್ಷ ರೂ.ವರೆಗೂ ಏರಿಕೆಯಾಗಿದೆ. ಇದುವೇ ಬಡ ನೀರಿನ ಬಳಕೆದಾರರಿಗೆ ಪಾವತಿ ಕಷ್ಟಸಾಧ್ಯವಾಗಿದೆ.
ಮತ್ತೊಂದು ದೊಡ್ಡ ಆದಾಯ ಮೂಲವಾದ ಆಸ್ತಿ ತೆರಿಗೆ ವಸೂಲಾತಿಯಲ್ಲೂ ಪಾಲಿಕೆ ಹಿಂದೆ ಬಿದ್ದಿದೆ. 2023-24ನೇ ಸಾಲಿನಲ್ಲಿ 214.55 ಕೋಟಿ ರೂ. ಪೈಕಿ 183.82 ಕೋಟಿ ರೂ. ಸಂಗ್ರಹವಾಗಿದೆ. 30.73 ಕೋಟಿ ರೂ. ಬಾಕಿ ಉಳಿದಿದೆ. 2024-02ನೇ ಸಾಲಿನಲ್ಲಿ 251.41 ಕೋಟಿ ರೂಪಾಯಿಯಲ್ಲಿ 210.03 ಕೋಟಿ ರೂ. ವಸೂಲಾತಿಯಾಗಿದ್ದು, 41.38 ಕೋಟಿ ರೂ. ಇನ್ನೂ ಬಾಕಿ ಉಳಿದಿದೆ. ಎರಡು ವರ್ಷದಿಂದ 72.11 ಕೋಟಿ ರೂ. ಆಸ್ತಿ ತೆರಿಗೆ ಪಾಲಿಕೆ ಬರಬೇಕಿದೆ.
ಪ್ರಸಕ್ತ ಆರ್ಥಿಕ ವರ್ಷ ಪೂರ್ಣಗೊಳ್ಳಲು ಬರೀ ಒಂದು ತಿಂಗಳು ಮಾತ್ರ ಉಳಿದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ನೀರಿನ ಶುಲ್ಕ ಮತ್ತು ಆಸ್ತಿ ತೆರಿಗೆ ಸಂಗ್ರಹದಲ್ಲಿ ಗುರಿ ಸಾಧಿಸಲು ಸಾಧ್ಯವೇ ಎಂಬ ಅನುಮಾನ ಮೂಡಿದೆ. ರಾಜ್ಯ ಸರ್ಕಾರದಿಂದ ವಿವಿಧ ಬಾಬ್ತಿನಲ್ಲಿ ಬರುವ ಅನುದಾನವೂ ಸಕಾಲಕ್ಕೆ ಬರುತ್ತಿಲ್ಲ. ಅದರಲ್ಲೂ ಕಡಿತವಾಗಿದೆ. ಜನಪ್ರತಿನಿಧಿಗಳು ಇಲ್ಲದ ಕಾರಣಕ್ಕೆ 26 ಕೋಟಿ ರೂ. ವಾಪಸ್ ಹೋಗಿದೆ. ಇದು ಸಹ ಪಾಲಿಕೆ ಆರ್ಥಿಕ ಸ್ಥಿತಿ ದುರ್ಬಲಗೊಳ್ಳಲು ಕಾರಣವಾಗಿದೆ.
ಹಣಕಾಸಿನ ಕೊರತೆ ಕಾರಣಕ್ಕೆ ಆರಂಭಿಸಿರುವ ಕಾಮಗಾರಿಗಳನ್ನೂ ನಿಲ್ಲಿಸಲಾಗಿದೆ. ಇದರಿಂದ ಕೆಲಸಗಳು ಅರೆಬರೆಯಾಗಿವೆ. ಇದು ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೀಗಾಗಿ, ಚಾಲ್ತಿಯಲ್ಲಿರುವ ಕೆಲಸ ಮುಂದುವರಿಸಿಕೊಂಡು ಹೋಗಿ, ಹೊಸ ಕಾಮಗಾರಿ ಕೈಗೊಳ್ಳದಿರಲು ಪಾಲಿಕೆ ಮುಂದಾಗಿದೆ.
ಅನಧಿಕೃತ ಮತ್ತು ಕಂದಾಯ ಬಡಾವಣೆಗಳಲ್ಲಿ ಮನೆ ನಿರ್ಮಾಣಕ್ಕೆ ಬಿ-ಖಾತಾ ವಿತರಣೆಯ ಮೂಲಕ ಆದಾಯ ಸಂಗ್ರಹಿಸಲು ಪಾಲಿಕೆ ಮುಂದಾಗಿದೆ. ಮೊದಲ ವರ್ಷ 100 ಕೋಟಿ ರೂ. ಬಳಿಕ ಪ್ರತಿ ವರ್ಷ 50 ಕೋಟಿ ರೂ. ಆದಾಯ ಬರುವ ಲೆಕ್ಕಾಚಾರ ಹಾಕಿಕೊಂಡಿದೆ. ನಗರದಲ್ಲಿ 28 ಸಾವಿರ ಅನಧಿಕೃತ ನಿವೇಶನಗಳಿವೆ. ನೀರಿನ ಕರ, ಆಸ್ತಿ ತೆರಿಗೆ ಸೇರಿದಂತೆ ವಿವಿಧ ಮೂಲಗಳಿಂದಲೂ ತೆರಿಗೆ ಸಂಗ್ರಹಿಸಲು ಪಾಲಿಕೆ ಇನ್ನಷ್ಟು ಚುರುಕಿನಿಂದ ಕೆಲಸ ಮಾಡಬೇಕಿದೆ. ಪಾಲಿಕೆಗೆ 450 ಕೋಟಿ ರೂ. ಆರ್ಥಿಕ ಹೊಡೆತ ಬಿದ್ದಿದೆ. ಕಾಮಗಾರಿಗಳ ಬಾಕಿ ಬಿಲ್ ಪಾವತಿಗೂ ಕಷ್ಟಕರವಾಗಿದ್ದು, ಸಂಕಷ್ಟ ನಿರ್ವಹಣೆಗಾಗಿ ನೀರಿನ ಶುಲ್ಕ, ಆಸ್ತಿ ತೆರಿಗೆ ಸೇರಿದಂತೆ ವಿವಿಧ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಲಾಗಿದೆ. ಹೆಚ್ಚಿನ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೇಖ್ ತನ್ವೀರ್ ಆಸೀಫ್, ಆಯುಕ್ತ ಮೈಸೂರು ಮಹಾನಗರಪಾಲಿಕೆ