ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತೀವ್ರ ಅನುದಾನ ಕೊರತೆ ಎದುರಿಸುತ್ತಿದೆ.
2023-24ನೇ ಸಾಲಿಗೆ ಬರೋಬ್ಬರಿ 85.40 ಕೋಟಿ ರೂ. ಕೊರತೆ ಆಯವ್ಯಯ ಮಂಡಿಸಲಾಗಿದೆ. ಹಣಕಾಸಿನ ಮುಗ್ಗಟ್ಟು ಪರಿಹಾರಕ್ಕೆ ಮೈಸೂರು ವಿಶ್ವವಿದ್ಯಾಲಯವನ್ನು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಮಾಡಬೇಕು ಎಂಬ ಸಲಹೆಯೂ ವ್ಯಕ್ತವಾಗಿದೆ.
ನೂತನ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಹಣಕಾಸು ಅಧಿಕಾರಿ ಸಂಗೀತಾ ಗಜಾನನ ಭಟ್ ಬಜೆಟ್ ಮಂಡಿಸಿದರು.
2023-24ನೇ ಸಾಲಿನಲ್ಲಿ 347.16 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಅದರಲ್ಲಿ 432.56 ಕೋಟಿ ರೂ. ವೆಚ್ಚವಾಗಲಿದ್ದು, 85.40 ಕೋಟಿ ರೂ. ಕೊರತೆ ಉಂಟಾಗಲಿದೆ. ಪಿಂಚಣಿ ಸೌಲಭ್ಯಕ್ಕೆ ರಾಜ್ಯ ಸರ್ಕಾರದಿಂದ ಕಡಿಮೆ ಅನುದಾನ ನೀಡುತ್ತಿದ್ದು, ಇದರಿಂದಾಗಿ ವಿವಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ.
ವಿವಿಯಲ್ಲಿ ಪ್ರಸ್ತುತ ಸುಮಾರು 1,841 ಪಿಂಚಣಿದಾರರಿದ್ದಾರೆ. 2023-24ನೇ ಸಾಲಿನಲ್ಲಿ 61 ಉದ್ಯೋಗಿಗಳು (21 ಬೋಧಕರು, 40 ಬೋಧಕೇತರರು) ನಿವೃತ್ತರಾಗಲಿದ್ದಾರೆ. ಆದಕಾರಣ ಪಿಂಚಣಿ ಬಾಬ್ತಿನ ವೆಚ್ಚ 127.62 ಕೋಟಿ ರೂ. ನಿಗದಿಪಡಿಸಲಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಕಡಿಮೆ ಅನುದಾನ ಬಿಡುಗಡೆಯಾಗಿರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯದ ಆಂತರಿಕ ಆದಾಯದಲ್ಲಿ 77.62 ಕೋಟಿ ರೂ. ಭರಿಸಬೇಕಾಗಿದೆ.
2022-23 ಮತ್ತು 2023-24ನೇ ಸಾಲಿನಲ್ಲಿ ಪಿಂಚಣಿ ಅನುದಾನವಾಗಿ ಸರ್ಕಾರ ಕ್ರಮವಾಗಿ 56 ಕೋಟಿ ರೂ. ಮತ್ತು 63 ಕೋಟಿ ರೂ. ಮಾತ್ರ ನೀಡಿದೆ. ಇದರಿಂದಾಗಿ ವಿವಿ ಅನುದಾನ ಕೊರತೆ ಎದುರಿಸುತ್ತಿದೆ. ಹಣಕಾಸಿನ ಕೊರತೆ ಸರಿದೂಗಿಸಿಕೊಳ್ಳಲು ಅಗತ್ಯ ವೆಚ್ಚ ಹೊರತುಪಡಿಸಿ, ಉಳಿದ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಜತೆಗೆ, ಹೆಚ್ಚುವರಿ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹಣಕಾಸು ಅಧಿಕಾರಿ ಸಂಗೀತಾ ಗಜಾನನ್ ಭಟ್ ತಿಳಿಸಿದರು.
ಕೊರತೆ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಪ್ರೊ.ಮುಜಾಫರ್ ಅಸ್ಸಾದಿ ಅವರು, ವಿವಿ ಆಂತರಿಕ ಸಂಪನ್ಮೂಲ ಕಡಿಮೆ ಆಗಿ, ವೆಚ್ಚ ಹೆಚ್ಚಿದೆ. ಹಣಕಾಸಿನ ಕೊರತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಲ್ಬಣಿಸಲಿದೆ. ಆದ್ದರಿಂದ ಮೈಸೂರು ವಿವಿಯನ್ನು ಕೇಂದ್ರೀಯ ವಿಶ್ವವಿದ್ಯಾಲಯವಾಗಿ ಪರಿವರ್ತನೆ ಮಾಡಲು ಶ್ರಮಿಸಬೇಕಾಗಿದೆ ಎಂದು ಸಲಹೆ ನೀಡಿದರು.