ಪಾಂಡವಪುರ: ಆದಾಯಕ್ಕಿಂತ ಹೆಚ್ಚು ಖರ್ಚು ಮಾಡದೇ ಆರ್ಥಿಕ ವ್ಯವಹಾರದಲ್ಲಿ ಶಿಸ್ತು ಕಾಪಾಡಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಡಿಂಕಾಶೆಟ್ಟಹಳ್ಳಿ ಗ್ರಾಮದಲ್ಲಿ ಭಾನುವಾರ ನೂತನ ಡೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಹಾಲು ಉತ್ಪಾದಕರು ಸಾಲ ಮಾಡಿ ಹಸು ಖರೀದಿಸಿ, ಅದರಿಂದ ಲಾಭ ಗಳಿಸುವ ನಿಟ್ಟಿನಲ್ಲಿ ಯೋಚಿಸಬೇಕು. ಇಲ್ಲವಾದರೆ ಸಾಲ ತೀರಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಹಣಕಾಸು ನಿರ್ವಹಣೆಯಲ್ಲಿ ಶಿಸ್ತು ಪಾಲಿಸಬೇಕು ಎಂದು ಸಲಹೆ ನೀಡಿದರು.
ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಮಾತನಾಡಿ, ಮನುಷ್ಯರಂತೆ ಮಾತನಾಡಲು ಬಾರದ ರಾಸುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ರಾಸುಗಳಿಗೆ ಖಾಸಗಿ ಪಶು ಆಹಾರ ನೀಡುವುದು ಪಾಪದ ಕೆಲಸ. ಒಕ್ಕೂಟ ಮಾರಾಟ ಮಾಡುವ ಫಿಡ್ಸ್‌ಗಳನ್ನು ಮಾತ್ರ ಹಸುಗಳಿಗೆ ನೀಡಬೇಕು. ಮೇವು ಕತ್ತರಿಸುವ ಹಾಗೂ ಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಇತ್ಯಾದಿಗಳನ್ನು ಮನ್‌ಮುಲ್ ಸಬ್ಸಿಡಿ ದರದಲ್ಲಿ ನೀಡುತ್ತದೆ. ಜತೆಗೆ ರಾಸುಗಳ ವಿಮೆ, ಗುಂಪು ವಿಮೆಗೆ ಒಕ್ಕೂಟವೇ ಶೇ.75ರಷ್ಟು ಹಣ ಪಾವತಿಸುತ್ತದೆ. ಈ ಸವಲತ್ತುಗಳನ್ನು ಬಳಸಿಕೊಂಡು ಗುಣಮಟ್ಟದ ಹಾಲು ಪೂರೈಸಬೇಕು ಎಂದರು.
ನಾಲ್ಕು ವರ್ಷಗಳ ಹಿಂದೆ ಪಾಂಡವಪುರ ತಾಲೂಕು ಹಾಲಿನ ಗುಣಮಟ್ಟದಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈಗ ಎರಡನೇ ಸ್ಥಾನದಲ್ಲಿದೆ. ಉತ್ಪಾದಕರು ಗುಣಮಟ್ಟದ ಹಾಲು ಪೂರೈಸದಿದ್ದರೆ ಸರ್ಕಾರದಿಂದ ಸಿಗುವ ಪ್ರೋತ್ಸಾಹಧನ ವಾಪಸ್ಸಾಗುತ್ತದೆ. ಇದರಿಂದ ಯಾರಿಗೂ ಲಾಭ ಆಗುವುದಿಲ್ಲ. ರಾಸುಗಳು ಗುಣಮಟ್ಟದ ಹಾಲು ನೀಡುತ್ತಿಲ್ಲ ಎಂದರೆ ನಾವು ಅವುಗಳನ್ನು ವೈಜ್ಞಾನಿಕವಾಗಿ ಸಾಕುತ್ತಿಲ್ಲ ಎಂದರ್ಥ. ಜತೆಗೆ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಡೇರಿ ಕಾರ್ಯದರ್ಶಿ ಒಗ್ಗೂಡಿ ಕೆಲಸ ಮಾಡಿದರೆ ಸಂಘ ಅಭಿವೃದ್ಧಿ ಕಾಣುತ್ತದೆ. ಇದರಿಂದ ಉತ್ಪಾದಕರು ಮತ್ತು ಡೇರಿ ಹೆಚ್ಚು ಲಾಭ ಕಾಣಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರದಲ್ಲಿ ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ವ್ಯವಸ್ಥಾಪಕ ನಿರ್ದೇಶಕ ಪಿ.ಆರ್.ಮಂಜೇಶ್, ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಸಹಾಯಕ ವ್ಯವಸ್ಥಾಪಕಿ ನಿವೇದಿತಾ, ಮಾರ್ಗವಿಸ್ತರಣಾಧಿಕಾರಿಗಳಾದ ಎಚ್.ಎನ್.ಉಷಾ, ನಿತನ್, ಡೇರಿ ಅಧ್ಯಕ್ಷೆ ಪಲ್ಲವಿ ಇತರರು ಇದ್ದರು.