ಜಿಲ್ಲೆ

ಆರ್ಥಿಕ ಭದ್ರತೆಗೆ ಸಮಗ್ರ ಕೃಷಿ ಅಗತ್ಯ

ಚಿತ್ರದುರ್ಗ: ಸಾವಯವ ಪದ್ಧತಿ ಅಳವಡಿಕೆಯೊಂದಿಗೆ ಸಮಗ್ರ ಕೃಷಿಯಲ್ಲಿ ತೊಡಗಬೇಕು. ಇದರಿಂದ ಉತ್ತಮ ಆದಾಯ ದೊರೆತು ಶಾಶ್ವತ ಆರ್ಥಿಕ ಭದ್ರತೆ ಸಿಗಲಿದೆ. ಈ ನಿಟ್ಟಿನಲ್ಲಿ ರೈತರು ಮುಂದಾಗಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.

ತಾಲೂಕಿನ ಡಿ.ಎಸ್.ಹಳ್ಳಿಯ ರೈತ ಜ್ಞಾನೇಶ್ ಅವರ ಜಮೀನಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ, ಕೃಷಿಕರ ಅಭಿಪ್ರಾಯ ಆಲಿಸಿದ ನಂತರ ಮಾತನಾಡಿದರು.

ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸಮಸ್ಯೆ ಇರುವ ವೇಳೆ ಭಾರತೀಯ ಕಿಸಾನ್ ಸಂಘ ದೇಸಿ ಹೆಸರಿನಲ್ಲಿ ಸಾವಯವ ಉತ್ಪನ್ನಗಳ ಬ್ರ್ಯಾಂಡ್‌ ಸೃಷ್ಟಿಸಿ, ಅದಕ್ಕೆ ದರ ನಿಗದಿಗೊಳಿಸಿ, ಉತ್ತಮ ಬೇಡಿಕೆ ಪಡೆದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರದ ಸೌಲಭ್ಯ ಪಡೆಯದೆಯೇ 4 ಎಕರೆ ಜಮೀನಿನೊಳಗೆ ಪ್ರತಿ ವರ್ಷ ಖರ್ಚು ತೆಗೆದು, ಅಂದಾಜು 10 ಲಕ್ಷ ರೂ. ಲಾಭವನ್ನು ಸಾವಯವ ಕೃಷಿಯಲ್ಲಿ ಪಡೆದು ಸಾರ್ಥಕ ಬದುಕು ಕಟ್ಟಿಕೊಂಡಿರುವ ಕೃಷಿಕ ಜ್ಞಾನೇಶ್ ಎಲ್ಲರಿಗೂ ಪ್ರೇರಣಾಶಕ್ತಿ, ಆದರ್ಶವಾಗಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಉನ್ನತ ವ್ಯಾಸಂಗ ಮಾಡಿ, ಸರ್ಕಾರಿ ಉದ್ಯೋಗ ತೊರೆದು, ಕೃಷಿಯತ್ತ ಆಕರ್ಷಿತರಾಗಿ ಸಾಧನೆ ಮಾಡಿರುವ ಸಾವಯವ ಕೃಷಿಕ ಜ್ಞಾನೇಶ್ ರೈತರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಜ್ಞಾನೇಶ್ ತಮ್ಮ ಬೆಳೆಗೆ ಗರಿಷ್ಠ ದರ ನಿಗದಿಪಡಿಸಿ ಮಾರಾಟ ಮಾಡಲು ಮುಂದಾಗಿದ್ದಾರೆ. ಗುಣಮಟ್ಟಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಸಾವಯವ ಕೃಷಿಗೆ ಒತ್ತು ನೀಡಿದ್ದಾರೆ ಎಂದರು.

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಸಮಗ್ರ ಕೃಷಿ ಮೂಲಕ ನಿರಂತರ ಲಾಭ ಗಳಿಸುವ ಕುರಿತು ವ್ಯಾಪಕ ಪ್ರಚಾರ ಆಗಬೇಕು. ರೈತರಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಜಮೀನಿನಲ್ಲಿ ನಿಂಬೆ, ಹಲಸು, ಪಪ್ಪಾಯ, ದಾಳಿಂಬೆ, ಕರಿಬೇವು, ನುಗ್ಗೆ, ಮಾವು, ಬಾಳೆ ಇತರೆ ಬೆಳೆ, ದೇಸಿ ತಳಿಯ ಹಸು, ಜೇನು ಸಾಕಾಣಿಕೆ, ಹೈನುಗಾರಿಕೆ ಕೃಷಿಯನ್ನು ಸಚಿವರು ವೀಕ್ಷಿಸಿದರು.

ಸಚಿವರಿಗೆ ಮನವಿ: ರಾಜ್ಯದಲ್ಲಿ ಸಾವಯವ ಕೃಷಿ ಪದ್ಧತಿ ಪ್ರೋತ್ಸಾಹಿಸುವಂತೆ, ರಾಸಾಯನಿಕ ಪದ್ಧತಿಗೆ ಕಡಿವಾಣ ಹಾಕುವಂತೆ, ರೈತರ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ, ರೈತರಿಗೆ ಸಕಾಲಕ್ಕೆ ಸ್ಪಂದಿಸುವಂತೆ ಸಚಿವರಿಗೆ ಇದೇ ವೇಳೆ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಡಿಸಿ ಜಿ.ಆರ್.ಜೆ.ದಿವ್ಯಾಪ್ರಭು, ಕೃಷಿ ನಿರ್ದೇಶಕ ಡಾ.ಜಿ.ಟಿ.ಪುತ್ರ, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ತಹಸೀಲ್ದಾರ್ ನಾಗವೇಣಿ ಇತರರಿದ್ದರು.