ಬೀದರ್: ರೈತರು ಕೃಷಿಯೊಂದಿಗೆ ವೈಜ್ಞಾನಿಕವಾಗಿ ಪಶುಪಾಲನೆಯಂಥ ಉಪ ಕಸುಬು ಕೈಗೊಂಡರೆ ಆರ್ಥಿಕವಾಗಿ ಸಬಲರಾಗಬಹುದು ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಹೇಳಿದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ) ಸಹಯೋಗದಡಿ ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ ಬಳಿಯ ದೇವಣಿ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರು, ಪಶುಪಾಲಕರಿಗಾಗಿ ವೈಜ್ಞಾನಿಕ ಪಶುಪಾಲನೆಯಿಂದ ಆರ್ಥಿಕಾಭಿವೃದ್ಧಿ ಮತ್ತು ಸುಸ್ಥಿರತೆ ಕುರಿತು ಹಮ್ಮಿಕೊಂಡಿದ್ದ ತರಬೇತಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗ ಪಶುಪಾಲನೆಗೆ ಬಹಳಷ್ಟು ಪೂರಕವಾಗಿದ್ದರಿಂದ ರೈತರು ಅದರಲ್ಲಿ ತೊಡಗಿಸಿಕೊಂಡು ಹೆಚ್ಚಿನ ಆದಾಯ ಪಡೆಯಬೇಕು. ಲಭ್ಯವಿರುವ ವಿವಿಧ ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಪಶುಪಾಲನೆ ಮಾಡಿದ್ದಲ್ಲಿ ನಿರೀಕ್ಷಿತ ಲಾಭ ಗಳಿಸಬಹುದು ಎಂದು ಸಲಹೆ ನೀಡಿದರು.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ನರಸಪ್ಪ ದೇವಗೊಂಡ ಮಾತನಾಡಿ, ಕೇವಲ ಕೃಷಿ ನಂಬಿಕೊಂಡರೆ ಮುಂದೆ ಬರಲು ಸಾಧ್ಯವಿಲ್ಲ. ಹೀಗಾಗಿ ಕೃಷಿಯೊಂದಿಗೆ ಹೈನುಗಾರಿಕೆಯಂಥ ಇತರ ಉಪ ಕಸುಬು ಮಾಡಿದರೆ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದರು.
ನಾಲ್ಕು ದಿನದ ತರಬೇತಿಯಲ್ಲಿ ವಿಷಯ ತಜ್ಞರು ರೈತರಿಗೆ ಹೈನುರಾಸುಗಳ ಆಯ್ಕೆ, ಕಡಿಮೆ ಖರ್ಚಿನಲ್ಲಿ ಹಸಿ ಮೇವು ಹಾಗೂ ಪಶು ಆಹಾರ ತಯಾರಿಕೆ, ಜಾನುವಾರುಗಳ ಆರೋಗ್ಯ ರಕ್ಷಣೆ, ಪ್ರಸೂತಿ ಮತ್ತು ಸಂತಾನೋತ್ಪತ್ತಿ ಸಮಸ್ಯೆ, ಬೇಸಿಗೆಯಲ್ಲಿ ಜಾನುವಾರುಗಳ ನಿರ್ವಹಣೆ, ಹಾಲಿನ ವಿವಿಧ ಉತ್ಪನ್ನ ಹಾಗೂ ಮಾರುಕಟ್ಟೆಯಂಥ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಯೋಜನಾ ಅಭಿಯಂತರ ಗಂಗಾಧರಪ್ಪ ಆರ್., ಪಶು ವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ವಿ. ಶಿವಪ್ರಕಾಶ, ವಿಸ್ತರಣಾ ನಿರ್ದೇಶಕ ಡಾ.ಬಸವರಾಜ ಅವಟಿ, ಮಹಾವಿದ್ಯಾಲಯದ ಪ್ರಭಾರಿ ಡೀನ್ ಡಾ.ಆರ್.ಜಿ. ಬಿಜುರಕರ್, ಸಹ ಪ್ರಾಧ್ಯಾಪಕ ಡಾ.ಪ್ರಕಾಶಕುಮಾರ ರಾಠೋಡ್, ಸಹಾಯಕ ಪ್ರಾಧ್ಯಾಪಕರಾದ ಡಾ.ವಿದ್ಯಾಸಾಗರ್, ಡಾ.ಕೊಟ್ರೇಶ್ ಪ್ರಸಾದ ಇತರರಿದ್ದರು.
ಪಶುಪಾಲನೆ ಹಾಗೂ ಮೀನುಗಾರಿಕೆ ಮಾಡುವ ರೈತರಿಗೆ ವಿಶ್ವವಿದ್ಯಾಲಯದಿಂದ ನೆರವು ಮತ್ತು ಸಲಹೆ ನೀಡಲಾಗುವುದು. ರೈತರು ಕೃಷಿಯೊಂದಿಗೆ ಉಪ ಕುಸುಬು ಮಾಡಲು ಆದ್ಯತೆ ನೀಡಬೇಕು. ಇದರಿಂದ ಆರ್ಥಿಕ ಸಬಲರಾಗಲು ನೆರವಾಗಲಿದೆ.
| ಪ್ರೊ.ಕೆ.ಸಿ.ವೀರಣ್ಣ
ಪಶುವೈದ್ಯಕೀಯ ವಿಶ್ವವಿದ್ಯಾಲಯ ಕುಲಪತಿ
ರೈತರು ಆತ್ಮವಿಶ್ವಾಸ ಹಾಗೂ ಸಹನೆಯಿಂದ ಪಶುಪಾಲನೆಯಲ್ಲಿ ತೊಡಗಿಸಿಕೊಂಡರೆ ಆರ್ಥಿಕ ಅಭಿವೃದ್ಧಿ ಜತೆಗೆ ಸುಸ್ಥಿರತೆ ಖಂಡಿತ ಸಾಧ್ಯ. ಹೀಗಾಗಿ ಕೃಷಿಕರು ಇಂಥ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು.
| ಡಾ.ನರಸಪ್ಪ ದೇವಗೊಂಡ
ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ