ಜಿಲ್ಲೆ

ಆರ್‌ಡಿ ಪಾಟೀಲ್ ಬೇಲ್ ರಿಜೆಕ್ಟ್

ಕಲಬುರಗಿ: ಎಸ್‌ಡಿಎ, ಎಫ್‌ಡಿಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಬಂಧಿತನಾಗಿರುವ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಸೇರಿ ೧೦ ಜನರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಜಿಲ್ಲಾ ಪ್ರಧಾನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
೨೦೨೩ ಅಕೋಬರ್‌ನಲ್ಲಿ ನಡೆದ ಎಸ್‌ಡಿಎ, ಎಫ್‌ಡಿಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ಆರ್.ಡಿ.ಪಾಟೀಲ್ ಸೇರಿ ೧೦ ಜನರ ವಿರುದ್ಧ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಮಂಗಳವಾರು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಎಸ್.ನಾಗಶ್ರೀ ಜಾಮೀನು ತಿರಸ್ಕರಿಸಿದ್ದಾರೆ.
ಹಿಂದೆ ಎಫ್‌ಐಆರ್ ಆಧಾರದಲ್ಲಿ ಜಾಮೀನು ಸಲ್ಲಿಕೆ ತಿರಸ್ಕಾರವಾಗಿತ್ತು. ಸಿಐಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದ ನಂತರ ಹೈಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿದ್ದು, ಅಲ್ಲಿಯೂ ನಿರಾಕರಿಸಿ ಕೆಳ ಹಂತದ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಿ ಎಂದು ಸೂಚಿಸಿತ್ತು. ಅದರಂತೆ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ನಿರಾಕರಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ನಂತರ ಜಾಮೀನು ತಿರಸ್ಕೃತವಾಗಿದ್ದು, ಪ್ರಸ್ತುತ ಬೇರೆ ಅವಕಾಶವಿಲ್ಲದೆ, ಜೈಲೇ ಕಾಯಂ ಆದಂತಾಗಿದೆ. ಸಿಐಡಿ ವಿಶೇಷ ಸಾರ್ವಜನಿಕ ಅಭಿಯೋಜಕ ಗೌರೀಶ ಖಾಶೆಂಪುರ ವಾದಿಸಿದ್ದರು.
ಪದೇ ಪದೆ ಈ ರೀತಿಯ ಕೃತ್ಯಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಐಡಿ ಪರ ವಕೀಲ ನ್ಯಾಯಾಲಯದ ಗಮನಕ್ಕೆ ತಂದು, ಜಾಮೀನು ತಿರಸ್ಕರಿಸುವಂತೆ ಕೋರಿದ್ದರು. ಪ್ರಕರಣದ ತನಿಖೆ ಕೈಗೊಂಡ ಸಿಐಡಿ ಅಧಿಕಾರಿಗಳು ಪ್ರಕರಣದ ೧೩ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಪ್ರಯೋಗಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ೧೦ ಜನ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.