ಬಳ್ಳಾರಿ : ಇಲ್ಲಿನ ಆರ್ಟಿಒ ಕಚೇರಿಯ ಪ್ರಥಮ ದರ್ಜೆ ಸಹಾಯಕನ ಮೇಲೆ ಜಿಲ್ಲಾ ಡ್ರೈವಿಂಗ್ ಸ್ಕೂಲ್ ಅಧ್ಯಕ್ಷ ಸೇರಿದಂತೆ ಏಳು ಜನ ಹಲ್ಲೆ ಮಾಡಿದ ಘಟನೆ ಗುರುವಾರ ನಡೆದಿದೆ.
ಎನ್. ನಾಗೇಶಕುಮಾರ ಹಲ್ಲೆಗೊಳದ ಸರ್ಕಾರಿ ಸಿಬ್ಬಂದಿ. ಇಲಾಖೆಯ ನಿಯಮದಂತೆ ‘ಡಿಎಲ್ ಕಾರ್ಡ್ಗಳನ್ನು ಅಂಚೆ ಕಚೇರಿ ನಿಯಾಮಾನುಸಾರ ವಿತರಿಸಲಾಗುತ್ತಿದೆ. ಆದರೆ, ಜಿಲ್ಲಾ ಡ್ರೈವಿಂಗ್ ಸ್ಕೂಲ್ ಅಧ್ಯಕ್ಷ ಕೆ.ಮೋಹನ್, ಅರುಣ, ತಿಪ್ಪೇಸ್ವಾಮಿ, ಅಜೀಜ್ ರೆಹಮಾನ್, ಅಮಿರ್ ರೆಹಮಾನ್, ಮನ್ಸೂರು ಹಾಗೂ ಜಿಲಾನ್ ನನ್ನ ಕಚೇರಿಗೆ ಬಂದು ತಮಗೆ ಸಂಬಂಧಿಸಿ ಡ್ರೈವಿಂಗ್ ಲೈಸನ್ಸ್ಗಳನ್ನು ಪೋಸ್ಟ್ ಮಾಡಬೇಡಿ. ನಮ್ಮ ಕೈಗೆ ಕೊಡಿ ಎಂದು ಕೇಳಿದಾಗ ಹಾಗೆಲ್ಲ ಡಿಎಲ್ ಕಾರ್ಡ್ಗಳನ್ನು ಕೈಗೆ ಕೊಡಲು ಆದೇಶವಿಲ್ಲ. ಸರ್ಕಾರ ಆದೇಶದಂತೆ ಸಂಬಂಧಪಟ್ಟವರಿಗೆ ಅಂಚೆ ಮೂಲಕ ಕಳುಹಿಸುವೆ ಎಂದು ಹೇಳಿದ್ದರಿಂದ ಈ ಎಲ್ಲ ಆರೋಪಿತರು ಏಕಾಏಕಿ ಅವ್ಯಾಚ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಏಳು ಜನ ವಿರುದ್ಧ ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.