ಜಿಲ್ಲೆ

ಆರ್‌ಎಸ್‌ಎಸ್ ಗಣವೇಷಧಾರಿಗಳಿಂದ ಪಥಸಂಚಲನ

ರಾಜಣ್ಣ

ಮಳವಳ್ಳಿ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ (ಆರ್‌ಎಸ್‌ಎಸ್)ನ ಶತಮಾನೋತ್ಸವ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಬಡಾವಣೆಗಳಲ್ಲಿ ಶಾಂತಿಯುತವಾಗಿ ಗಣವೇಷಧಾರಿಗಳ ಪಥಸಂಚಲನ ಜರುಗಿತು.

ಪಟ್ಟಣದ ಪಟ್ಟಲದಮ್ಮ ದೇವಾಲಯದ ಆವರಣದಿಂದ ಸಂಜೆ 4 ಗಂಟೆಯಲ್ಲಿ ಆರಂಭವಾದ ಪಥ ಸಂಚಲನದಲ್ಲಿ ಮುನ್ನೂರಕ್ಕೂ ಹೆಚ್ಚು ಗಣವೇಷಧಾರಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ಮುಂಭಾಗ ಅಲಂಕೃತ ತೆರೆದ ವಾಹನದಲ್ಲಿ ಭಾರತಮಾತೆ ಹಾಗೂ ಆರ್‌ಎಸ್‌ಎಸ್ ಸಂಸ್ಥಾಪಕ ಗೋಳ್ವಾಲ್ಕರ್ ಅವರ ಭಾವಚಿತ್ರ ಇರಿಸಿ, ಭಗವಾಧ್ವಜ ಹಿಡಿದು ಪಟ್ಟಣದ ಎಲ್ಲ ಬಡಾವಣೆಗಳ ಪ್ರಮುಖ ರಸ್ತೆಗಳು ಹಾಗೂ ಹೆದ್ದಾರಿಯುದ್ದಕ್ಕೂ ಪಥಸಂಚಲನ ನಡೆಸಲಾಯಿತು.

ಮೆರವಣಿಗೆ ಉದ್ದಕ್ಕೂ ಭಾರತಮಾತೆ ಮತ್ತು ಹಿಂದು ಸಂಘಟನೆ ಪರ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಕೆಲ ಬಡಾವಣೆಗಳಿಗೆ ಪಥ ಸಂಚಲನ ಆಗಮಿಸಿದಾಗ ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತ ಕೋರಿದರು.

ಸಂಜೆ ಏಳು ಗಂಟೆಗೆ ಮೆರವಣಿಗೆ ಪಟ್ಟಲದಮ್ಮ ದೇವಾಲಯ ಆವರಣಕ್ಕೆ ಆಗಮಿಸಿ ಅಲ್ಲಿ ಸಮಾಪ್ತಿಯಾಯಿತು.

ಪಥ ಸಂಚಲನದಲ್ಲಿ ಹಲವಾರು ಆರ್‌ಎಸ್‌ಎಸ್ ಪ್ರಮುಖರು, ತಾಲೂಕಿನ ಸ್ವಯಂ ಸೇವಕರು, ಮಕ್ಕಳು ಪಾಲ್ಗೊಂಡಿದ್ದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.